

ಬೆಂಗಳೂರು: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಮರು ಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಬಹು ಕೋಟಿ ರೂ.ಗಳ ಚರ-ಸ್ಥಿರಾಸ್ತಿಗೆ ಒಡೆಯರಾಗಿದ್ದಾರೆ. ನಾಮಪತ್ರದೊಂದಿಗೆ ಲಗತ್ತಿಸಿರುವ ಅಫಿಡವಿಟ್‌ನಲ್ಲಿ ತಮ್ಮ, ಪತ್ನಿ, ಪುತ್ರನ ಹೆಸರಿನಲ್ಲಿರುವ ಚರ, ಸ್ಥಿರ ಆಸ್ತಿ ಹಾಗೂ ಸಾಲದ ವಿವರಗಳನ್ನು ನೀಡಿದ್ದಾರೆ.
ಕೈಯ್ಯಲ್ಲಿ 2.50 ಲಕ್ಷ ರೂ. ನಗದು ಹೊಂದಿದ್ದಾರೆ. ತಲಾ ಒಂದು ಬಿಎಂಡಬ್ಲ್ಯು, ಹ್ಯುಂಡೈ ಆಕ್ಸೆಂಟ್, ಮಾರುತಿ-800 ಕಾರು, ರ‌್ಯಾಡೋ ಅಂಡ್ ರೋಲೆಕ್ಸ್ ವಾಚ್, ಠೇವಣಿಗಳು ಸೇರಿ 7.17 ಕೋಟಿ ರೂ. ಮೌಲ್ಯ, ಪತ್ನಿ ಬಿ.ಎನ್.ಉಷಾನಂದಿನಿ ಹೆಸರಿನಲ್ಲಿ ಎರಡು ಕೆಜಿ ಚಿನ್ನ, ಕಾರ್ ಸೇರಿ 3.45 ಕೋಟಿ ರೂ. ಮೌಲ್ಯ, ಮಗ ವೈ.ಎನ್.ಪ್ರಜ್ಞ ನಾರಾಯಣ ಹೆಸರಿನಲ್ಲಿ ಚಿನ್ನ, ಠೇವಣಿ ಸೇರಿ 13.33 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ.
ಕೃಷಿ, ಕೃಷಿಯೇತರ ಜಮೀನು, ಮನೆ, ವಾಣಿಜ್ಯಿಕ ಕಟ್ಟಡ ಒಳಗೊಂಡು ನಾರಾಯಣಸ್ವಾಮಿ ಮತ್ತವರ ಪತ್ನಿ ಒಟ್ಟು 23.72 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ ಇಬ್ಬರದು ಸೇರಿ 13.12 ಕೋಟಿ ರೂ. ಸಾಲವಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.
ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಬಿಜೆಪಿಯ ಅ.ದೇವೇಗೌಡರಿಗಿಂತ ಅವರ ಪತ್ನಿ ಕೆ.ಚೂಡಾಮಣಿಯೇ ಶ್ರೀಮಂತೆಯಾಗಿದ್ದಾರೆ. ಇನ್ನೋವಾ ಕಾರು, ಚಿನ್ನ ಸೇರಿ 56.20 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ. ಕೃಷಿ ಜಮೀನು, ಕೃಷಿಯೇತರ ನಿವೇಶನ, ಮನೆ ಸೇರಿ 70 ಲಕ್ಷ ರೂ. ಸ್ಥಿರಾಸ್ತಿಯಿದ್ದರೂ ಸರ್ಕಾರಕ್ಕೆ 1.46 ಲಕ್ಷ ರೂ. ತೆರಿಗೆ ಬಾಕಿಯಿರಿಸಿಕೊಂಡಿದ್ದಾರೆ.
ಅ.ದೇವೇಗೌಡರ ಪತ್ನಿ ಕೆ.ಚೂಡಾಮಣಿ ಹೆಸರಿನಲ್ಲಿ ಚಿನ್ನ,ಬೆಳ್ಳಿ ಸೇರಿ 36.42 ಲಕ್ಷ ರೂ. ಮೌಲ್ಯದ ಚರ, ಮನೆಗಳು, ವಾಣಿಜ್ಯಿಕ ಕಟ್ಟಡ ಸೇರಿ 5.74 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 4.50 ಲಕ್ಷ ರೂ. ಸಾಲ ಹೊಂದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಕೇಂದ್ರೀಯ ಪೊಲೀಸ್ ಠಾಣೆಯಲ್ಲಿ ಮೆಡಿಕಲ್ ಸೀಟು ವಂಚನೆ ಪ್ರಕರಣ ದಾಖಲಾಗಿರುವುದನ್ನು ಅಫಿಡವಿಟ್‌ನಲ್ಲಿ ಅ.ದೇವೇಗೌಡ ಉಲ್ಲೇಖಿಸಿದ್ದಾರೆ.