

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಅತಿ ಹೆಚ್ಚು ಸದ್ದು ಮಾಡುತ್ತಿದ್ದ ಬಿಜೆಪಿ ಬಂಡಾಯ ತಣ್ಣಗಾಗಿದೆ. ಮಾಜಿ ಸಚಿವ, ಅಭ್ಯರ್ಥಿ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಈಗ ಜೀವದ ಗೆಳೆಯರು !
ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ ನಡೆಸಿದ ಮಾತುಕತೆ, ನೀಡಿದ ಡೋಸ್ ವರ್ಕೌಟ್ ಆಗಿದೆ. ಶಾಸಕ ಎಸ್.ಆರ್.ವಿಶ್ವನಾಥ್ ಮನೆಗೆ ಬುಧವಾರ ಬೆಳಗಿನ ಉಪಾಹಾರಕ್ಕೆ ಡಾ.ಸುಧಾಕರ್ ಬಂದಿದ್ದರು. ಈ ವೇಳೆ ಹಾಜರಿದ್ದ ಪಕ್ಷದ ರಾಜ್ಯ ಲೋಕಸಭಾ ಚುನಾವಣೆ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ರಾಜಿ ಸಂಧಾನ ಮಾಡಿಸಿ, ಮನಸ್ತಾಪ ಹಾಗೂ ಗೊಂದಲಕ್ಕೆ ತೆರೆ ಎಳೆದರು.
ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ ಡಾ.ಸುಧಾಕರ್ ವಿಧಾನಸಭೆ ಕ್ಷೇತ್ರಾವಾರು ಪ್ರಚಾರ, ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಗಳನ್ನು ಶುರು ಮಾಡಿಸಿದ್ದರು. ವಿಶ್ವನಾಥ್ ಮುನಿಸಿನಿಂದ ಬಾಕಿಯಿದ್ದ ಯಲಹಂಕ ಕ್ಷೇತ್ರದ ಪ್ರಚಾರಕ್ಕೆ ಮಾರ್ಗ ಸುಲಭವಾಗಿದೆ. ಪುತ್ರ ಅಲೋಕ್ ಗೆ ಟಿಕೆಟ್ ತಪ್ಪಿ ಸುಧಾಕರ್ ಪಾಲಾದದ್ದು ವಿಶ್ವನಾಥ್ ಬಂಡಾಯಕ್ಕೆ ಕಾರಣವಾಗಿತ್ತು.
ಅಮಿತ್ ಷಾ ಮಧ್ಯೆ ಪ್ರವೇಶದೊಂದಿಗೆ ಬಿಕ್ಕಟ್ಟು ಶಮನವಾಗಿದೆ. ಉಪಾಹಾರದ ಬಳಿಕ ಡಾ.ಸುಧಾಕರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಾನು ಹಾಗೂ ವಿಶ್ವನಾಥ್ ಒಳ್ಳೆಯ ಸ್ನೇಹಿತರು. ಬೆಳಗಿನ ತಿಂಡಿಗೆ ಕರೆದಿದ್ದರು, ಬಂದಿದ್ದೆ. ನಾಳೆ ನಾನು ಮತ್ತೊಮ್ಮೆ ನಾಮಪತ್ರ ಸಲ್ಲಿಸುವೆ ಎಂದು ಹೇಳಿದರು.
ಅಮಿತ್ ಷಾ ತೆಗೆದುಕೊಂಡ ಕ್ಲಾಸ್ ಗೆ ಹಲವು ಕ್ಷೇತ್ರಗಳಲ್ಲಿ ತಲೆದೋರಿದ್ದ ಅಸಮಾಧಾನ ಒಂದೊಂದಾಗಿ ಇತ್ಯರ್ಥವಾಗುತ್ತಿವೆ. ತುಮಕೂರಿನಲ್ಲಿ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ದೋಸ್ತಿ ಕುದುರುವುದು ಬಾಕಿಯಿದೆ.
ಅಮಿತ್ ಷಾ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ವೇಳೆ ಮಾಜಿ ಸಿಎಂ ಎಚ್ ಡಿ.ಕುಮಾರಸ್ವಾಮಿ ಹಾಸನ ಕ್ಷೇತ್ರದ ಬಂಡಾಯದತ್ತ ಗಮನಸೆಳೆದಿದ್ದಾರೆ. ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಮತ್ತವರ ತಂಡ ಮೈತ್ರಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಬಗ್ಗೆ ದೂರಿದ್ದಾರೆ. ಎಲ್ಲವನ್ನು ಕೇಳಿಸಿಕೊಂಡ ಅಮಿತ್ ಷಾ ಸರಿಹೋಗುತ್ತದೆ ಎಂಬ ಅಭಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.