ಸಿಬಿಐ ತನಿಖೆಗೆ ಆದೇಶಿಸಿ, ರಾಜೀನಾಮೆ ನೀಡಿ; ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಒತ್ತಾಯ

b Y v
Published on

ಬೆಂಗಳೂರು:
ಮೂಡಾ ಹಗರಣದಲ್ಲಿ ಹೈಕೋರ್ಟ್ ತೀರ್ಪಿನ ಬೆನ್ನಲ್ಲಿಯೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಕೂಡ ಹೊರ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಇನ್ನು ಒಂದು ಕ್ಷಣ ಕೂಡ ವಿಳಂಬ ಮಾಡದೆ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಅಧಿಕಾರದಿಂದ ನಿರ್ಗಮಿಸಬೇಕು ಎಂದು ಒತ್ತಾಯಿಸಿದರು.
ಹಿಂದೆ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಆರೋಪಗಳು ಬಂದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಇದೇ ಸಿದ್ದರಾಮಯ್ಯ ಏನು ಮಾತನಾಡಿದ್ದರು ಎನ್ನುವುದನ್ನು ಜ್ಞಾಪಿಸಿಕೊಳ್ಳಲಿ ಎಂದು ವಿಡಿಯೋ ತುಣುಕನ್ನು ಟಿ.ವಿ. ಮೂಲಕ ಪ್ರದರ್ಶನ ಮಾಡಿದರು.
ತನಿಖೆ ನಡೆಯುವಾಗ ಸಿಎಂ ಅಧಿಕಾರದಲ್ಲಿದ್ದಾಗ ಪ್ರಭಾವ ಬೀರುವ ಸಾಧ್ಯತೆಗಳಿವೆ. ಈ ಕಾರಣ ನ್ಯಾಯಯುತ ಮತ್ತು ನಿಷ್ಪಕ್ಷಪಾತ (ಫೇರ್ ಆಂಡ್ ಇಂಪಾರ್ಶಿಯಲ್) ತನಿಖೆ ಅಸಾಧ್ಯ. ಅದಕ್ಕೋಸ್ಕರ ಮಿಸ್ಟರ್ ಯಡಿಯೂರಪ್ಪ ಅಧಿಕಾರದಲ್ಲಿ ಇರಬಾರದು. ಹಿ ಶುಡ್ ರಿಸೈನ್ ಇಮ್ಮೀಡಿಯೆಟ್ಲಿ ಎಂದಿದ್ದರು. ಅವರೇ ಹೇಳಿದ್ದ ಹಾಗೆ ಈಗ ಸಿದ್ದರಾಮಯ್ಯ ಅವರು ಕೂಡ ನಡೆದುಕೊಳ್ಳಲಿ ಎಂದರು.
ಭ್ರಷ್ಟ ಕಾಂಗ್ರೆಸ್ ಮತ್ತು ಭ್ರಷ್ಟ ಮುಖ್ಯಮಂತ್ರಿ ವಿರುದ್ಧ ನಿರಂತರವಾಗಿ ಬಿಜೆಪಿ ಹೋರಾಟ ಮಾಡುತ್ತ ಬಂದಿದೆ. ಬೆಂಗಳೂರಿನಿಂದ ಮೈಸೂರಿಗೆ ಮೈಸೂರು ಚಲೋ ಪಾದಯಾತ್ರೆ ನಡೆಸಲಾಗಿತ್ತು. ಖಾಸಗಿ ದೂರಿನ ಆಧಾರದ ಮೇಲೆ ರಾಜ್ಯಪಾಲರು ಇವತ್ತು ತನಿಖೆಗೆ ಅನುಮತಿ ನೀಡಿ, ರಾಜ್ಯಪಾಲರ ಆದೇಶವನ್ನು ರಾಜ್ಯ ಹೈಕೋರ್ಟ್ ರಾಜ್ಯಪಾಲರು ನೀಡಿದ ಆದೇಶ ಕ್ರಮಬದ್ಧವಾಗಿದೆ ಎಂದು ಹೇಳಿದೆ. ಇದೀಗ ವಿಶೇಷ ನ್ಯಾಯಾಲಯವು ಮುಡಾ ಹಗರಣದ ತನಿಖೆಗೆ ಸೂಚಿಸಿದೆ. ಇನ್ನು ತಡ ಮಾಡದೆ ಸಿಎಂ ಹುದ್ದೆ ತ್ಯಜಿಸಬೇಕು ಎಂದರು.

ಲೋಕಾಯುಕ್ತ ಪೊಲೀಸರಿಂದ
ನ್ಯಾಯಯುತ ತನಿಖೆ ಸಾಧ್ಯವೇ?
ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಲು ಸೂಚಿಸಲಾಗಿದೆ. ಆದರೆ, ಸಿಎಂ ತವರು ಜಿಲ್ಲೆಯಲ್ಲಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಲ್ಲಿರುವ ಲೋಕಾಯುಕ್ತ ಪೊಲೀಸರಿಂದ ಯಾವುದೇ ರೀತಿ ನ್ಯಾಯಯುತ ತನಿಖೆ ನಡೆಸಲು ಅಸಾಧ್ಯ ಎಂದು ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.
ಕೋರ್ಟ್ ಆದೇಶ ಮಾಡಿರಬಹುದು. ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಸಲುವಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡುವ ಮುನ್ನ ಈ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಯಾದ ಸಿಬಿಐಗೆ ವಹಿಸಬೇಕು. ಆಗ ಸಿದ್ದರಾಮಯ್ಯ ಅವರ ಮೇಲೆ ಗೌರವ ಹೆಚ್ಚಾಗುತ್ತದೆ ಎಂದರು.

ಎರಡು ತೀರ್ಪುಗಳು
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ಅರ್ಜಿ ಸಂಬಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಮಗ್ರವಾಗಿ ವಾದ ಮಂಡನೆಯೂ ಆಗಿತ್ತು. ನಿನ್ನೆ ಹೈಕೋರ್ಟ್ ತೀರ್ಪಿನಲ್ಲಿ ರಾಜ್ಯಪಾಲರ ನಿರ್ಣಯ ಸರಿಯಾಗಿದೆ, ಕ್ರಮಬದ್ಧವಾಗಿದೆ ಎಂದು ತಿಳಿಸಿತ್ತು. ಇವತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೈಸೂರಿನ ಮೂಡ ಹಗರಣದಲ್ಲಿ ಮಹತ್ವದ ಆದೇಶವನ್ನು ಪ್ರಕಟಿಸಿದೆ. ಎರಡೂ ತೀರ್ಪಿನಲ್ಲಿಯೂ ಸಿಎಂ ಮೇಲೆ ಕ್ರಮಕ್ಕೆ ಸೂಚನೆ ಇದೆ ಎಂದರು.

ಜಮೀನು ಬಗ್ಗೆಯೂ ತನಿಖೆಯಾಗಲಿ
ಮೂಡ ಹಗರಣದಲ್ಲಿ ಸಿಎಂ ಕುಟುಂಬಕ್ಕೆ ಸಿಕ್ಕಿದ 56 ಕೋಟಿ ಮೌಲ್ಯದ 14 ನಿವೇಶನಗಳ ವಿಷಯದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಸಿದ್ದರಾಮಯ್ಯನವರ ಬಾಮೈದ ದೇವರಾಜ್ರಿಂದ ಖರೀದಿ ಮಾಡಿದ್ದ 3 ಎಕರೆ ಜಮೀನು, ದೇವರಾಜ್ ಹೆಸರಿನಲ್ಲಿ ಡಿನೋಟಿಫಿಕೇಶನ್ ಕೂಡ ಆಗಿತ್ತು. ಇವೆಲ್ಲವೂ ಕ್ರಮಬದ್ಧವಾಗಿ ಇರಲಿಲ್ಲ ಎಂಬ ಅಂಶವನ್ನು ಕೂಡ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪಿನಲ್ಲಿ ಗಮನಿಸಿದೆ. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದರು.

ನಿವೇಶನಗಳು ರಿಯಲ್ ಎಸ್ಟೇಟ್ ಪಾಲು
ಮುಡಾ ಹಗರಣದ ಕುರಿತು ಬಿಜೆಪಿ ನಿಲುವು ಸ್ಪಷ್ಟವಿದೆ. ಈ ಹಗರಣ ಕೇವಲ 14 ನಿವೇಶನಗಳಿಗೆ ಸೀಮಿತವಲ್ಲ. ಒಂದೆಡೆ 14 ನಿವೇಶನಗಳಿದ್ದರೆ, ಇನ್ನೊಂದೆಡೆ 4ರಿಂದ 5 ಸಾವಿರ ಕೋಟಿ ಬೆಲೆ ಬಾಳುವ ನಿವೇಶನಗಳು ರಿಯಲ್ ಎಸ್ಟೇಟ್, ದಲ್ಲಾಳಿಗಳ ಪಾಲಾಗಿದೆ. ಇದೆಲ್ಲವುಗಳ ಸಮಗ್ರ ತನಿಖೆ ಆಗಬೇಕೆಂದರೆ ಅದು ಸಿಬಿಐನಿಂದ ಮಾತ್ರ ಸಾಧ್ಯ ಎಂದು ವಿಜಯೇಂದ್ರ ವಿಶ್ಲೇಷಿಸಿದರು.

ತನಿಖೆ ಎದುರಿಸಲಿ
ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯದ ಆದೇಶದ ಪ್ರತಿಯನ್ನು ನೀಡಿದ ತಕ್ಷಣ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಅವರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ನಡೆಸಿ 3 ತಿಂಗಳಿನಲ್ಲಿ ವರದಿ ಕೊಡಬೇಕಿದೆ. ನ್ಯಾಯಾಲಯದ ತೀರ್ಪು ನನ್ನ ಗಮನಕ್ಕೆ ಬಂದಿದೆ. ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ, ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ. ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದರು.

ವಿಧಾನಪರಿಷತ್ ವಿರೋಧ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಭಾರತಿ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ. ಮಂಜುಳಾ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net