ಬಿಜೆಪಿಯಲ್ಲಿ ನಿಲ್ಲದ ಬಣ ರಾಜಕೀಯ

bjp-flag
Published on

ಬೆಂಗಳೂರು:
ಬಿಜೆಪಿಯಲ್ಲಿ ಬಣಗಳ ರಾಜಕೀಯ ತಿಕ್ಕಾಟ ಇನ್ನೂ ಮುಗಿಯುತ್ತಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದ ಬಣ ರಾಜಕೀಯ ಈಗ ದೆಹಲಿಯನ್ನು ಮುಟ್ಟಿದೆ.
ಶಾಸಕ ಬಸನಗೌಡ ಯತ್ನಾಳ್ ದೆಹಲಿ ಭೇಟಿ ಮುಗಿದ ಬೆನ್ನಲ್ಲಿಯೇ ಮಾಜಿ ಸಚಿವ ವಿ.ಸೋಮಣ್ಣ ದೆಹಲಿಯ ಪೆರೆಡ್ ಮಾಡಿರುವುದು ವಿಶೇಷ.
ಅಸಮಾಧಾನಿತರೆಲ್ಲರೂ ಒಟ್ಟಾಗಿ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ನಾಯಕರಿಗೆ ಒಟ್ಟಿಗೆ ಭೇಟಿ ಮಾಡಲು ವರಿಷ್ಠರು ಅವಕಾಶ ನೀಡಿಲ್ಲ. ಹಾಗಾಗಿ ಒಬ್ಬೊಬ್ಬರೇ ಪ್ರತ್ಯೇಕವಾಗಿ ಭೇಟಿಯಾಗಿ ದೂರು ದುಮ್ಮಾನ ಹೇಳಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲ ದಿನಗಳು ಸಮಾಧಾನವಾಗಿರುವಂತೆ ಕಂಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಮತ್ತೆ ದೆಹಲಿ ಹಾದಿ ಹಿಡಿದಿರುವುದು ವಿಶೇಷ. ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದ ಸೋಮಣ್ಣ, ಚುನಾವಣೆಯಲ್ಲಿ ತಮಗೆ ಆಗಿರುವ ಅನ್ಯಾಯ ಮತ್ತು ಯಾರ‌್ಯಾರು ಏನೇನು ಪಿತೂರಿ ಮಾಡಿದರು ಎನ್ನುವ ವಿಷಯವನ್ನು ಹೇಳಿಕೊಂಡಿದ್ದಾರೆನ್ನಲಾಗಿದೆ.
ಭಿನ್ನಮತಕ್ಕೆ ತೇಪೆ ಹಚ್ಚುವ ಕೆಲಸ ಮಾಡಲು ಮುಂದಾಗಿರುವ ವರಿಷ್ಠರು, ಅದರ ಭಾಗವಾಗಿ ಪ್ರತ್ಯೇಕ ಭೇಟಿ ಮಾಡಿ ಅಸಮಾಧಾನವನ್ನು ಸ್ವಲ್ಪ ಮಟ್ಟಿಗೆ ಸಮಾಧಾನ ಮಾಡುವ ಪ್ರಯತ್ನದಲ್ಲಿದ್ದಾರೆ. ಲೋಕಸಭಾ ಚುನಾವಣೆ ತನಕವೂ ಬಣ ರಾಜಕೀಯವನ್ನು ನಿಭಾಯಿಸಲು ಮುಂದಾಗಿದ್ದಾರೆ. ಬಳಿಕ ನಿರ್ಧಿಷ್ಟವಾಗಿ ಒಂದು ತೀರ್ಮಾನ ತೆಗೆದುಕೊಳ್ಳಲು ವರಿಷ್ಠರು ಕ್ರಮ ಕೈಗೊಳ್ಳಬಹುದು ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net