

ಎಚ್.ಡಿ.ಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದಲ್ಲಿರುವ ನಾವು ಅನುಮಾನಸ್ಪದ ನಾಗರಿಕರು ಎಂದು ಕರೆಸಿಕೊಳ್ಳುವ ಸಂದರ್ಭ ಬಂದೊದಗಿದೆ ಎಂದು ವಿಚಾರವಾದಿ ಶಿವಸುಂದರ್ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಅದರ ಸಂಬಂಧಿತ ಕಾಯ್ದೆಗಳ ದುಷ್ಪರಿಮಾಣಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ನಾವೆಲ್ಲರೂ 71ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತ ಒಂದು ದೇಶವಾಗಿ ಉಳಿಯಲು ಸಾಧ್ಯವೇ ಎಂದು ಅನುಮಾನ ಭಾರತೀಯರಲ್ಲಿ ಉಂಟಾಗಿದೆ. ಅಲ್ಲದೆ ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು. ಇದಕ್ಕೆ ಕಾರಣ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂದು ಹೇಳಿದರು.
ದೇಶದ ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು 1948ರಿಂದಲೂ ಹೇಳುತ್ತಿದ್ದಾರೆ. ಇದರ ಭಾಗವಾಗಿ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಯನ್ನು ಬಿಜೆಪಿ ಜಾರಿಗೆ ತರುವ ಮೂಲಕ ಅಸಮಾನತೆ ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ವಿಚಾರವಾದಿ ಪ್ರೊ.ಶಬ್ಬೀರ್ ಮುಸ್ತಫ ಮಾತನಾಡಿ, ಜನ ಹಾಗೂ ಸಂವಿಧಾನ ವಿರೋಧಿ ಸಿದ್ಧಾಂತಗಳನ್ನು ಜಾರಿಗೆ ತರಲು ಮುಂದಾಗಿರುವ ಬಿಜೆಪಿ, ಆರೆಸ್ಸೆಸ್ ಮತ್ತು ಸಂಘಪರಿವಾರದ ಹಿಡನ್ ಅಜೆಂಡಾಗಳನ್ನು ವಿರೋಧಿಸುವವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬೆಟ್ಟಯ್ಯ ಕೋಟೆ ಮಾತನಾಡಿ, ಸಂವಿಧಾನದಡಿಯಲ್ಲಿ ಆಳ್ವಿಕೆ ನಡೆಯುತ್ತಿರುವ ದೇಶದಲ್ಲಿ ಸಂವಿಧಾನ ರಕ್ಷಣಾ ಸಮಿತಿ ಮಾಡಿಕೊಂಡು ಹೋರಾಟ ನಡೆಸುತ್ತಿರುವುದು ನಗೆಪಾಟಲಿನ ಸಂಗತಿ ಎಂದರು.
ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಬಾಬುರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಸರ್ವಜನಾಂಗ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಮಗ್ಗೆ ಇಬ್ರಾಹಿಂ, ವಿಚಾರವಾದಿಗಳಾದ ಕ್ಷೀರಸಾಗರ, ಏಜಾಜ್ ಪಾಷ, ವಿವೇಕ ಕಾರ್ಯಪ್ಪ, ಭೀಮನಹಳ್ಳಿ ಮಹದೇವು, ಜೆ.ಪಿ.ನಾಗರಾಜು, ಅಕ್ಬರ್ ಪಾಷ, ಚೌಡಹಳ್ಳಿ ಜವರಯ್ಯ ಇತರರು ಹಾಜರಿದ್ದರು.