ಎಸ್‌ಸಿ ಸಮೀಕ್ಷೆ ನಮೂನೆಯಲ್ಲಿ ‘ಗೊತ್ತಿಲ್ಲ’ ಕೈಬಿಡಲು ಬಿಜೆಪಿ ಮನವಿ | Justice Nagmohan das convinced delegation

BJP delegation
Published on

ಬೆಂಗಳೂರು: ರಾಜ್ಯದಲ್ಲಿ ಮೇ 5ರಿಂದ ಪರಿಶಿಷ್ಟ ಜಾತಿ ಜನಗಣತಿ ಸಮೀಕ್ಷೆ ಶುರುವಾಗಲಿದೆ. ಇದಕ್ಕಾಗಿ ಏಕಸದಸ್ಯ ವಿಚಾರಣಾ ಆಯೋಗ ಸಿದ್ಧಪಡಿಸಿರುವ ನಿಗದಿತ ನಮೂನೆಯಲ್ಲಿ ಎಸ್‌ಸಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಪ್ರತ್ಯೇಕ ಸಂಕೇತ ಸಂಖ್ಯೆಯನ್ನು ನೀಡಲಾಗಿದೆ. ಇದರೊಂದಿಗೆ 102ನೇಯದಾಗಿ ‘ನನಗೆ ಗೊತ್ತಿಲ್ಲ’ ಎಂದು ಸೇರಿಸಿದ್ದನ್ನು ಕೈಬಿಡಲು ಪ್ರತಿಪಕ್ಷ ಬಿಜೆಪಿ ಕೋರಿದೆ.

ಏಕಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾ.ಡಾ.ನಾಗಮೋಹನ್‌ದಾಸ್ ಅವರಿಗೆ ಪಕ್ಷದ ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದ ನಿಯೋಗ ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಗಣತಿ ಾರ್ಮಾಟ್‌ನಲ್ಲಿ ‘ನನಗೆ ಗೊತ್ತಿಲ್ಲ’ ಎನ್ನುವುದು ಸೇರಿಸಿರುವ ಕಾರಣ ಎಸ್‌ಸಿ ಪಟ್ಟಿಯಲ್ಲಿರುವ 101 ಸಮುದಾಯಗಳು ಅದರಲ್ಲೂ ಮಾದಿಗ ಮತ್ತದರ ಉಪಜಾತಿಗಳಿಗೆ ಗೊಂದಲ, ಸಂಶಯಕ್ಕೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ, ‘ನನಗೆ ಗೊತ್ತಿಲ್ಲ’ ಎನ್ನುವುದನ್ನು ತೆಗೆದುಹಾಕಲು ಕೋರಿತು.

ಜಸ್ಟಿಸ್ ಮನವರಿಕೆ

ನಿಯೋಗದ ಅಹವಾಲು ಆಲಿಸಿ, ಮನವಿ ಸ್ವೀಕರಿಸಿದ ನ್ಯಾ.ನಾಗಮೋಹನ್‌ದಾಸ್ ಅವರು ಆದಿ ದ್ರಾವಿಡ, ಆದಿ ಆಂಧ್ರ ಎಂದು ಗುರುತಿಸಿಕೊಂಡವರು ಸಮೀಕ್ಷೆಯಲ್ಲಿ ಉಪಜಾತಿಯನ್ನು ಹೆಸರಿಸಬೇಕಾಗುತ್ತದೆ. ಆ ಉಪಜಾತಿ, ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಇಲ್ಲದಿದ್ದರೆ ಅವರನ್ನು ಜಾತಿ ಗೊತ್ತಿಲ್ಲದವರ ಪಟ್ಟಿಗೆ ಸೇರಿಸಲಾಗುತ್ತದೆ ಎಂದರು.

ಅಲ್ಲದೆ, ಆದಿ ದ್ರಾವಿಡ ಎಂದು ಗುರುತಿಸಿಕೊಂಡಿರುವ ಕರಾವಳಿ ಭಾಗದ ‘ಮನ್ಸ’ ಉಪಜಾತಿಯ ಉದಾಹರಣೆಯೊಂದಿಗೆ ಬಿಜೆಪಿ ನಿಯೋಗಕ್ಕೆ ನ್ಯಾ.ನಾಗಮೋಹನ್ ದಾಸ್ ಮನವರಿಕೆ ಮಾಡಿಕೊಟ್ಟು, ಆಯೋಗದ ಸಿದ್ಧತೆಗಳನ್ನೂ ವಿವರಿಸಿದರು.

ಇದೇ ಸಂದರ್ಭದಲ್ಲಿ ಮತಾಂತರವಾದ ದಲಿತರ ಜಾತಿ ಗುರುತಿಸುವಿಕೆ, ಬೆಂಗಳೂರಿನಲ್ಲಿ ನೆಲೆಸಿರುವ ಅನ್ಯಭಾಷಿಗ ದಲಿತರು, 1200ಕ್ಕೂ ಹೆಚ್ಚು ಸ್ಲಮ್‌ಗಳ ನಿವಾಸಿಗಳು, ನೆಲೆ ಇಲ್ಲದ ಅಲೆಮಾರಿಗಳ ಗುರುತಿಸುವಿಕೆಯ ಬಗ್ಗೆ ಚರ್ಚಿಸಲಾಯಿತು.

ಈ ನಿಯೋಗದಲ್ಲಿ ಬಿಜೆಪಿ ರಾಜ್ಯ ವಕ್ತಾರ ವೆಂಕಟೇಶ್ ದೊಡ್ಡೇರಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಎಂಆರ್‌ಪಿಎಸ್ ಪ್ರಧಾನ ಕಾರ್ಯದರ್ಶಿ ದೇವರಾಜ ಬಾಬು, ಸತ್ಯೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net