

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ-ಸಮಾಜವಾದಿ ಪಕ್ಷಗಳ ಮಧ್ಯೆ ನೇರ ಹಣಾಹಣಿ ನಡೆಯಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಬಿಜೆಪಿ ಸಿಎಂ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದರೂ, ಯೋಗಿ ಆಡಳಿತದ ಬಗ್ಗೆ ಅಸಮಾಧಾನಗೊಂಡಿರುವ ಮತವರ್ಗವನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಈ ನಡುವೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಉಸ್ತುವಾರಿ ಬಿ.ಎಲ್. ಸಂತೋಷ್ ಮತ್ತು ಉತ್ತರ ಪ್ರದೇಶ ಉಸ್ತುವಾರಿ ರಾಧಾ ಮೋಹನ್ ಸಿಂಗ್ 20 ದಿನಗಳ ಅಂತರದಲ್ಲಿ 2ನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ್ದು, ಸಿಎಂ ಯೋಗಿ, ಡಿಸಿಎಂಗಳಾದ ದಿನೇಶ್ ಶರ್ಮ ಮತ್ತು ಕೇಶವ್ ಪ್ರಸಾದ್ ಮೌರ್ಯ ಸೇರಿ ಹಿರಿಯ ಮುಖಂಡರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಆರ್ಎಸ್ಎಸ್ ನಾಯಕರಾದ ದತ್ತಾತ್ರೇಯ ಹೊಸಬಾಳೆ ಮತ್ತು ಕೃಷ್ಣ ಗೋಪಾಲ್ ಅವರೂ ಸಭೆಯಲ್ಲಿ ಭಾಗಿಯಾಗಿದ್ದಾರೆ. ಮಿಷನ್ 300 ಯೋಜನೆ ಹಮ್ಮಿಕೊಂಡಿರುವ ಬಿಜೆಪಿ 403 ಸೀಟುಗಳಲ್ಲಿ ಕನಿಷ್ಠ 300 ಸೀಟುಗಳನ್ನು ಗೆಲ್ಲಬೇಕೆಂಬ ಲೆಕ್ಕಾಚಾರ ಹಾಕಿಕೊಂಡಿದೆ. ಬಿ.ಎಲ್. ಸಂತೋಷ್, ರಾಧಾ ಮೋಹನ್ ಸಿಂಗ್ ಹಿಂದಿನ ಭೇಟಿ ವೇಳೆ ಮುನ್ಸಿಪಲ್ ಕಾರ್ಪೆರೇಷನ್ ಮತ್ತು ರಾಜ್ಯದ ವಿವಿಧ ಆಯೋಗ, ನಿಗಮಗಳಿಗೆ ನೇಮಕಗಳು ನಡೆಯದ್ದರ ಬಗ್ಗೆ ಅತೃಪ್ತಿ ತೋಡಿಕೊಂಡಿದ್ದರು. ನಂತರ, ಕೆಲ ನೇಮಕಾತಿಗಳನ್ನು ಕೈಗೊಳ್ಳಲಾಗಿತ್ತು.
ಏತನ್ಮಧ್ಯೆ, ಬಿಜೆಪಿ ಮಿತ್ರಪಕ್ಷ ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಲ್ (ನಿಷಾದ್) ಪಕ್ಷದ ನಾಯಕ ಸಂಜಯ್ ನಿಷಾದ್ 2022ರ ಚುನಾವಣೆಯಲ್ಲಿ ತಮ್ಮನ್ನು ಮೈತ್ರಿಕೂಟದ ಉಪ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಸುಮಾರು 160 ಕ್ಷೇತ್ರಗಳಲ್ಲಿ ನಿಷಾದ್ ಸಮುದಾಯ ಹಬ್ಬಿದೆ.350 ಸೀಟು ಗೆಲ್ಲಲಿದ್ದೇವೆಪಂಚಾಯತ್ ಚುನಾವಣೆಯಲ್ಲಿ ಗಮನಾರ್ಹ ನಿರ್ವಹಣೆ ತೋರಿ ಹೊಸ ಉತ್ಸಾಹದಲ್ಲಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 350ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅಥವಾ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸೋಲಿಸಬಯಸುವ ಸಮಾನ ಮನಸ್ಕ ಪಕ್ಷ ನಮ್ಮನ್ನು ಸಂಪರ್ಕಿಸಬಹುದು ಎಂದಿದ್ದಾರೆ. 2017ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ವೇಳೆ ಕಾಂಗ್ರೆಸ್ಗೆ 100ಕ್ಕಿಂತಲೂ ಹೆಚ್ಚು ಸೀಟುಗಳನ್ನು ಬಿಟ್ಟುಕೊಡಲಾಗಿತ್ತು. ಆದರೆ, ಎಸ್ಪಿ ಇದರಿಂದ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚಾಗಿತ್ತು. 2019ರಲ್ಲಿ ಬಿಎಸ್ಪಿ ಜತೆಗಿನ ಮೈತ್ರಿಯೂ ಎಸ್ಪಿಗೆ ಲಾಭ ತಂದುಕೊಟ್ಟಿರಲಿಲ್ಲ. ಪವಾರ್-ಪ್ರಶಾಂತ್ ಭೇಟಿಯಶವಂತ ಸಿನ್ಹಾ ನೇತೃತ್ವದ ರಾಷ್ಟ್ರೀಯ ಮಂಚ್ ಎನ್ಸಿಪಿ ನಾಯಕ ಶರದ್ ಪವಾರ್ ನಿವಾಸದಲ್ಲಿ ವಿಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಬೆನ್ನಲ್ಲೇ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ಶರದ್ ಪವಾರ್ರನ್ನು ಭೇಟಿ ಮಾಡಿದ್ದಾರೆ. ಕಳೆದೆರಡು ವಾರಗಳಲ್ಲಿ ಪವಾರ್-ಪಿಕೆ ನಡುವೆ ನಡೆಯುತ್ತಿರುವ 3ನೇ ಭೇಟಿ ಇದಾಗಿದೆ. ಸರಣಿ ಸಭೆ ನಡೆಸಿರುವುದು ಕುತೂಹಲ ಕೆರಳಿಸಿದೆ.