

ಬೆಂಗಳೂರು: ವಿಶಿಷ್ಟವಾದ ಅಲೆಮಾರಿ ಸಮುದಾಯಗಳನ್ನು ಬಲಾಢ್ಯರ ಗುಂಪಿಗೆ ಸೇರಿಸಿದ ರಾಜ್ಯ ಸರ್ಕಾರ, ಎಸ್‌ಸಿ ಮೀಸಲು ವಗೀರ್ಕರಣದಲ್ಲಿ ಬಹುದೊಡ್ಡ ಅನ್ಯಾಯ ಮಾಡಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾನಿರತ ಅಲೆಮಾರಿ ಸಮುದಾಯಗಳಿಗೆ ಬೆಂಬಲಿಸಿ, ಪ್ರತ್ಯೇಕ ಮೀಸಲಿಗೆ ಸಮುದಾಯಗಳ ಮಂಡಿಸಿರುವ ಬೇಡಿಕೆ ನ್ಯಾಯಸಮ್ಮತವಾಗಿದೆ ಎಂದು ಸಹಾನುಭೂತಿ ವ್ಯಕ್ತಪಡಿಸಿತು.
ಪ್ರತಿಭಟನಾನಿರತ ಸಮುದಾಯಗಳ ಮುಖಂಡರು ಸಲ್ಲಿಸಿದ ಮನವಿಯನ್ನು ಬಿಜೆಪಿ ನಾಯಕರು ಸ್ವೀಕರಿಸಿ, ರಾಜ್ಯ ಸರ್ಕಾರದ ಗಮನಸೆಳೆದು ಬೇಡಿಕೆ ಈಡೇರಿಸಲು ಒತ್ತಡ ತರುವುದಾಗಿ ತಿಳಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗವು ಎರಡು ತಿಂಗಳ ಕಾಲ ಸಮೀಕ್ಷೆ ನಡೆಸಿ, ದತ್ತಾಂಶಗಳನ್ನು ಸಂಗ್ರಹಿಸಿ ವರದಿ ತಯಾರಿಸಿದೆ.
ಪರಿಶಿಷ್ಟರ 101 ಜಾತಿಗಳನ್ನು ಐದು ಗುಂಪುಗಳಲ್ಲಿ ವಿಂಗಡಿಸಿ ಶೇ.17 ಮೀಸಲು ಹಂಚಿಕೆಗೆ ಶಿಫಾರಸು ಮಾಡಿದೆ. ಈ ಪೈಕಿ ಅಲೆಮಾರಿಗಳ 59 ಸಮುದಾಯಗಳಿಗೆ ಒಟ್ಟು ಶೇ.1ರಷ್ಟು ಮೀಸಲಾತಿ ಕಲ್ಪಿಸುವ ಶಿಾರಸು ಸೇರಿದೆ.
ಆದರೆ ರಾಜ್ಯ ಸಚಿವ ಸಂಪುಟ ಸಭೆಯು ಕೇವಲ ಎರಡು ತಾಸುಗಳ ಚರ್ಚೆಯಲ್ಲಿ ಆಯೋಗದ ಶಿಫಾರಸು ಬದಿಗಿಟ್ಟು, ಮೂರು ಗುಂಪುಗಳಲ್ಲಿ ವಿಂಗಡಿಸಿ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ಆಧಾರ ಏನೆಂಬುದು ಗೊತ್ತಿಲ್ಲ ಎಂದು ಟೀಕಿಸಿದರು.
ಸೌಲಭ್ಯ, ಸಂಪತ್ತು, ವಿದ್ಯೆ, ನೌಕರಿಯಿಂದ ವಂಚಿತವಾದ ಸಮುದಾಯಗಳಿಗೆ ಅವಕಾಶ ಕೊಡುವುದು ಒಳಮೀಸಲಾತಿ ಉದ್ದೇಶವಾಗಿದೆ. ಆದರೆ ರಾಜ್ಯ ಸರ್ಕಾರ ಅದ್ಯಾವುದನ್ನು ಪರಿಗಣಿಸಿಲ್ಲ ಎಂದು ದೂರಿದರು.
ಯಾರೋ ನಾಲ್ಕು ಜನರನ್ನು ತೃಪ್ತಿಪಡಿಸುವ ಕಡೆಗೆ ಇವರ ನೀತಿಯಿದೆ. ಸಾಮಾಜಿಕ ನ್ಯಾಯ ಕೊಡುವ ಕಡೆಗೆ ಇಲ್ಲ. ಎಲ್ಲ ಇವರಿಗೆ ಗೊತ್ತಿರುವ ಬೃಹಸ್ಪತಿಗಳಾಗಿದ್ದರೆ ಆಯೋಗ ರಚನೆ, ಸಮೀಕ್ಷೆ, ದತ್ತಾಂಶ ಸಂಗ್ರಹವೆಂದು 26 ತಿಂಗಳು ಕಾಲ ಕಳೆಯುವ ಬದಲು ಆಗಲೇ ಕೊಡಬಹುದಿತ್ತು.
ಪ್ರಭಾವಿಗಳ ಒತ್ತಡಕ್ಕೆ ಮಣಿದು ಆಯೋಗದ ತೀರ್ಮಾನವನ್ನು ನಿರ್ಲಕ್ಷಿಸಿದೆ. ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ತಾತ್ಸಾರ ಮಾಡಿದ ಕಾಂಗ್ರೆಸ್ ಸರ್ಕಾರ, ಸಾಮಾಜಿಕ ಅನ್ಯಾಯ ಮಾಡಿದೆ ಎಂದು ಸಿ.ಟಿ.ರವಿ. ಆರೋಪಿಸಿದರು.
ಪ್ರತಿಭಟನೆಗೆ ಬೆಂಬಲಿಸಿ ಮನವಿ ಸ್ವೀಕರಿಸುವ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕರಾದ ಎನ್.ರವಿಕುಮಾರ್, ಶಾಸಕರಾದ ಸಿ.ಟಿ.ರವಿ, ಡಾ.ಶೈಲೇಂದ್ರ ಬೆಲ್ದಾಳೆ ಇನ್ನಿತರ ಮುಖಂಡರು ಇದ್ದರು.