ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ಫೆ.27ರಿಂದ ಬಿಜೆಪಿ ಆಂದೋಲನ | Awareness against SCP TSP fund misutilisation

BJP
Published on

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನೆ ಅನುದಾನ ದುರ್ಬಳಕೆ ವಿರುದ್ಧ ಪ್ರತಿಪಕ್ಷ ಬಿಜೆಪಿ ಸೆಡ್ಡು ಹೊಡೆದು, ಫೆ.27ರಿಂದ ಜನ ಜಾಗೃತಿ ಆಂದೋಲನಕ್ಕೆ ಸಜ್ಜಾಗಿದೆ. ತಲಾ ಎರಡು ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲೆಂದು 14 ತಂಡಗಳನ್ನು ರಚಿಸಲಾಗಿದೆ.

ಮಾ.2ರವರೆಗೆ ಜನ ಜಾಗೃತಿ ಆಂದೋಲನ ಹಮ್ಮಿಕೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕರು, ಹಾಲಿ-ಮಾಜಿ ಸಂಸದರು ತಲಾ ಒಂದು ತಂಡದ ನೇತೃತ್ವವಹಿಸಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಶೇ.24.50ರಷ್ಟು ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವ ಶಾಸನ ಜಾರಿಗೊಳಿಸಿದ್ದೇ ತಾವು ಎಂದು ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ಪದೇ ಪದೆ ಹೇಳುತ್ತಾರೆ.

ಶೋಷಿತರಿಗೆ ವಂಚನೆ

ಆದರೆ ಇದೇ ಕಾಯ್ದೆಯಲ್ಲಿದ್ದ ಅನ್ಯ ಉದ್ದೇಶಕ್ಕೆ ಬಳಕೆಗೆ ಅವಕಾಶ ಕೊಟ್ಟಿದ್ದ 7ಡಿ ಉಪ ಬಂಧವನ್ನು ಒತ್ತಡ ತಂದ ಮೇಲೆ ತೆಗೆದು ಹಾಕಿತು. ಆದರೂ ಉಪ ಯೋಜನೆ ಅನುದಾನವನ್ನು ಅನ್ಯ ಉದ್ದೇಶ ಅದರಲ್ಲೂ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದೆ.

ಪರಿಶಿಷ್ಟ ಜಾತಿ, ಪಂಗಡಗಳಿಗೆ ವಿನಿಯೋಗಿಸಬೇಕಾದ ಅನುದಾನ ಬೇರೆಡೆ ತಿರುಗಿಸುವುದು ಸಹ ದುರ್ಬಳಕೆಯೇ ಸರಿ. ಎರಡು ವರ್ಷಗಳ ಒಟ್ಟು 25 ಸಾವಿರ ಕೋಟಿ ರೂ. ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿ, ಶೋಷಿತ ಸಮುದಾಯಗಳಿಗೆ ವಂಚಿಸಿದೆ ಎನ್ನುವುದು ಬಿಜೆಪಿ ದೂರಾಗಿದೆ.

ಒತ್ತಡ ತಂತ್ರಗಾರಿಕೆ

ಹಿಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಸದನ ಒಳ-ಹೊರಗೆ ಹೋರಾಟ ಮಾಡಿದರೂ 25 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ವಿನಿಯೋಗಿಸಿ, ಕಾಯ್ದೆಯ 7ಸಿ ಸೆಕ್ಷನ್ ಪ್ರಕಾರ ಗ್ಯಾರಂಟಿಗಳಡಿ ಅದೇ ಸಮುದಾಯಗಳಿಗೆ ವಿನಿಯೋಗಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದೆ.

ಮುಂದಿನ ಬಜೆಟ್‌ಗೂ ಸಿಎಂ ಸಿದ್ದರಾಮಯ್ಯ ಹಿಂದಿನ ಜಾಡು ಹಿಡಿಯುವುದನ್ನು ತಪ್ಪಿಸಿ, ಮಾಹಿತಿ ನೀಡುವ ಜನರಲ್ಲಿ ಜಾಗೃತಿ ಮೂಡಿಸುವುದು. ಆ ಮೂಲಕ ಪ್ರಬಲವಾಗಿ ಧ್ವನಿ ಎತ್ತುವಂತೆ ಮಾಡಿ ಒತ್ತಡ ಹೇರುವುದು ಬಿಜೆಪಿ ಜಾಗೃತಿ ಆಂದೋಲನ ಕಾರ್ಯತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net