ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

8-RNR-03
Published on

ರಾಣೆಬೆನ್ನೂರ: ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕದ ವತಿಯಿಂದ ಶುಕ್ರವಾರ ತಹಸೀಲ್ದಾರ್ ಕಚೇರಿಗೆ ಎತ್ತಿನ ಬಂಡಿ ಸಮೇತ ಆಗಮಿಸಿದ ಪ್ರತಿಭಟನೆ ನಡೆಸಿದರು.
ನಗರದ ಬಿಜೆಪಿ ಕಾರ್ಯಾಲಯದಿಂದ ಎತ್ತಿನ ಬಂಡಿಗಳ ಮೆರವಣಿಗೆ ಮೂಲಕ ಪೋಸ್ಟ್ ವೃತ್ತ, ಎಂ.ಜಿ. ರಸ್ತೆ ಹಾಗೂ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ಬಂದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನರಿಗೆ ಬೇಡವಾದ ಬಿಟ್ಟಿ ಭಾಗ್ಯಗಳನ್ನು ಜಾರಿಗೆ ತರುವ ಆತುರದಲ್ಲಿ ಯಡಿಯೂರಪ್ಪನವರು ಮತ್ತು ಬಸವರಾಜ ಬೊಮ್ಮಾಯಿಯವರು ಜಾರಿ ಮಾಡಿದ ರೈತ ಪರ ಯೋಜನೆಗಳನ್ನು ತಡೆದು ರೈತ ವಿರೋಧಿ ಸರ್ಕಾರ ನಡೆಸುತ್ತಿದ್ದಾರೆ.
ರೈತರು ಸಾಲಸೂಲ ಮಾಡಿ ಬಿತ್ತನೆ ಮಾಡಿದ್ದಾರೆ. ಬೆಳೆದು ನಿಂತ ಬೆಳೆಗಳು ಮಳೆ ಇಲ್ಲದೆ ಒಣಗಿದ್ದು ನಾಡಿಗೆ ಅನ್ನ ನೀಡುವ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. ರಾಜ್ಯ ಸರ್ಕಾರ ತಕ್ಷಣವೇ ರಾಣೆಬೆನ್ನೂರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತನ ನೆರವಿಗೆ ಮುಂದಾಗಬೇಕು.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ ನಿಧಿ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ ಯೋಜನೆ, ಕ್ಷೀರ ಸಮೃದ್ಧಿ ಸೇರಿ ರೈತ ಪರವಾದ ಹಲವಾರು ಯೋಜನೆಗಳನ್ನು ಮುಂದುವರಿಸಬೇಕು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸುಮಾರು 42 ಜನ ರೈತರ ಆತ್ಮಹತ್ಯೆ ಪ್ರಕರಣಗಳ ವರದಿಯಾಗಿರುವುದು ಆತ್ಯಂತ ದುರ್ದೈವದ ಸಂಗತಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ನಗರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ತಾಲೂಕು ಅಧ್ಯಕ್ಷ ಬಸವರಾಜ ಕೇಲಗಾರ, ಪ್ರಮುಖರಾದ ಡಾ. ಬಸವರಾಜ ಕೇಲಗಾರ, ಕೆ. ಶಿವಲಿಂಗಪ್ಪ, ಮಂಜುನಾಥ ಓಲೇಕಾರ, ಗದಿಗೆಪ್ಪ ಹೊಟ್ಟಿಗೌಡ್ರ, ಮಲ್ಲಣ್ಣ ಅಂಗಡಿ, ಮಂಜುಳಾ ಹತ್ತಿ, ಪ್ರಕಾಶ ಪೂಜಾರ, ಬಸವರಾಜ ಹುಲ್ಲತ್ತಿ, ಎ.ಬಿ. ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net