ಇಂದಿನಿಂದ ಇಪ್ಪತ್ತು ದಿನ ಬಿಜೆಪಿ ಸೇವೆ-ಸಮರ್ಪಣೆ ಅಭಿಯಾನ; ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಾರ್ಯಕ್ರಮ

Modi 71
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೆ.17ರಿಂದ ಅಕ್ಟೋಬರ್ 7ರವರೆಗೆ ಕೆರೆಕಟ್ಟೆಗಳ ಸ್ವಚ್ಛತೆ, ಜಲಮೂಲಗಳಲ್ಲಿ ಪ್ಲಾಸ್ಟಿಕ್ ಹೆಕ್ಕುವುದು ಸೇರಿ ವಿವಿಧ ಜನಪರ ಯೋಜನೆಗಳ ಮೂಲಕ ಸೇವೆ ಮತ್ತು ಸಮರ್ಪಣೆ ಅಭಿಯಾನವನ್ನು ಬಿಜೆಪಿ ರಾಜ್ಯದಲ್ಲಿ ಹಮ್ಮಿಕೊಂಡಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದರು.

ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಅಗತ್ಯ ಸೇವೆ ಮಾಡಲಾಗುವುದು. ರಾಜ್ಯಕ್ಕೆ 7 ಸ್ಮಾರ್ಟ್ ಸಿಟಿಗಳನ್ನು ನೀಡಿದ್ದು, ಅವರಿಗೆ ಜನರ ಪರವಾಗಿ ಧನ್ಯವಾದ ಸಮರ್ಪಿಸುವುದಾಗಿ ಹೇಳಿದರು. ಅಂಗವಿಕಲರಿಗೆ ನೆರವು ಮತ್ತು ಸೈಕಲ್, ಬೈಕ್, ಶ್ರವಣ ಉಪಕರಣ ಸೇರಿ ಉಪಯುಕ್ತ ಸಲಕರಣೆಗಳ ವಿತರಣೆ ನಡೆಯಲಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಘಟಿಸಲಾಗುವುದು. ಮೋದಿ ಸರ್ಕಾರ ಕೈಗೊಂಡ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಾಗುವುದು. ಅ.2ರಂದು ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಗುವುದು. ಸ್ವದೇಶಿ ವಸ್ತು ಖರೀದಿಯ ಅಭಿಯಾನ ನಡೆಯಲಿದೆ. ಪ್ರತಿಯೊಬ್ಬ ಕಾರ್ಯಕರ್ತರು ಇದರಲ್ಲಿ ಭಾಗವಹಿಸುವರು. ಖಾದಿ, ಸ್ವದೇಶಿ ಬಟ್ಟೆ ಖರೀದಿಸಲಾಗುವುದು ಎಂದರು. ಕುಂಬಾರರು, ಕಮ್ಮಾರರು ಸೇರಿ ಕೌಶಲ ಆಧಾರಿತ ಬದುಕು ಸಾಗಿಸುವವರಿಂದ ವಸ್ತುಗಳನ್ನು ಖರೀದಿಸಲಾಗುತ್ತದೆ. ಟಾಯ್ಲೆಟ್ ಕಟ್ಟಿಸಿಕೊಡಲು ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಅನುದಾನ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಸೆ.17ರಿಂದ ಅ.7ರವರೆಗೆ ಪ್ರಧಾನಮಂತ್ರಿಗಳು ಸ್ವೀಕರಿಸಿದ ಉಡುಗೊರೆಗಳು, ಸ್ಮರಣಿಕೆಗಳು ಇತ್ಯಾದಿಗಳು ಹರಾಜಿಗೆ ಲಭ್ಯವಿರುತ್ತದೆ. ಹರಾಜಿನಲ್ಲಿ ಗರಿಷ್ಠ ನೋಂದಣಿ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಪ್ರಚಾರ ಮಾಡಲಿದ್ದೇವೆ. ಸಂಗ್ರಹಿಸಿದ ದೊಡ್ಡ ಮೊತ್ತದ ನಿಧಿಯನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ನಮೋ ಆಪ್​ನಲ್ಲಿ ಮೈ ಸೇವಾ ಟ್ರಿಬ್ಯೂಟ್ (ನನ್ನ ಸೇವಾ ಕೊಡುಗೆ) ಮಾಡ್ಯೂಲ್ ಲಭ್ಯವಿದೆ. ಇಲ್ಲಿ ಪಕ್ಷದ ಕಾರ್ಯಕರ್ತರು ಕೈಗೊಂಡ ಸೇವಾ ಕಾರ್ಯದ ಬಗ್ಗೆ ವಿವರಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಪ್ರಧಾನ ಮಂತ್ರಿಗಳಿಗೆ ಹಾರೈಸಲು ಉತ್ತೇಜನ ನೀಡಲಾಗುವುದು ಎಂದರು.

ಸೆ.25 ಪಂಡಿತ್ ದೀನ್​ದಯಾಳ್ ಉಪಾಧ್ಯಾಯರ ಜನ್ಮದಿನ. ಅವರ ವಿಚಾರಗಳಾಗಿರುವ ಏಕಾತ್ಮ ಮಾನವ ದರ್ಶನ ಮತ್ತು ಅಂತ್ಯೋದಯಕ್ಕೆ ಬದ್ಧರಾಗಿದ್ದೇವೆ. ಜನಸಂಘದ ಚಿಹ್ನೆ ದೀಪದಿಂದ ಕಮಲದವರೆಗೆ ಎಂಬ ಪರಿಕಲ್ಪನೆಯಡಿ ಜನ್ಮದಿನವನ್ನು ಆಚರಿಸಲಾಗುತ್ತದೆ. ಪಕ್ಷ ಬೆಳೆದುಬಂದ ದಾರಿಯನ್ನು ಮಂಡಲ, ಬೂತ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ತಿಳಿಸುವ ಸಭೆಗಳು ನಡೆಯಲಿವೆ ಎಂದು ವಿವರಿಸಿದರು.

ರಾಜ್ಯದ 60 ಸಾವಿರ ಬೂತ್, 311 ಮಂಡಲ, 37 ಸಂಘಟನಾ ಜಿಲ್ಲಾ ಕೇಂದ್ರಗಳಲ್ಲಿ ಇಂಥ ಕಾರ್ಯಕ್ರಮ ನಡೆಯಲಿದೆ. ಎಲ್ಲ ಜನಪ್ರತಿನಿಧಿಗಳೂ ಭಾಗವಹಿಸುವರು ಎಂದು ತಿಳಿಸಿದರು. ಪ್ರಧಾನ ಮಂತ್ರಿಯವರಿಗೆ ಶುಭ ಹಾರೈಸುವ ಮತ್ತು ಬಡವರಿಗಾಗಿ ಅವರು ಕೈಗೊಂಡ ಕಲ್ಯಾಣ ಕಾರ್ಯಗಳಿಗಾಗಿ ಅವರಿಗೆ ಧನ್ಯವಾದ ತಿಳಿಸುವ 5 ಕೋಟಿ ಪೋಸ್ಟ್ ಕಾರ್ಡ್​ಗಳನ್ನು ಜನರು ಬರೆಯಲು ಪ್ರೇರೇಪಿಸಲಾಗುವುದು. ಪ್ರತಿ ಬೂತ್​ನಿಂದ 10 ಪೋಸ್ಟ್ ಕಾರ್ಡ್ ಬರೆಯುವಂತೆ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ರಾಜ್ಯದಿಂದ ಸುಮಾರು 6 ಲಕ್ಷ ಪತ್ರಗಳನ್ನು ಬರೆಯಲಿದ್ದೇವೆ ಎಂದರು.

ಕಾರ್ಯಕಾರಿಣಿ...

ಸೆ.19ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ದಾವಣಗೆರೆಯಲ್ಲಿ ನಡೆಯಲಿದೆ. ರಾಜ್ಯದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷರು, ಸಚಿವರು, ಆಹ್ವಾನಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಶಾಸಕರಾದ ಸಂಜೀವ ಮಠಂದೂರು, ಲಾಲಾಜಿ. ಆರ್. ಮೆಂಡನ್, ಎನ್, ರವಿಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net