

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಮೊಹಮ್ಮದ್ ನಲಪಾಡ್‌ನ್ನು ಸಿಐಡಿಯ ವಿಶೇಷ ತನಿಖಾ ತಂಡ(ಎಸ್‌ಐಟಿ) ಬುಧವಾರ ವಿಚಾರಣೆ ನಡೆಸಿದೆ.
ಬಿಟ್ ಕಾಯಿನ್ ಕೇಸ್‌ನ ಕಿಂಗ್‌ಪಿನ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ನಲಪಾಡ್ ಆಪ್ತನಾಗಿದ್ದ. ಕಾಟನ್‌ಪೇಟೆ ಠಾಣೆಯಲ್ಲಿ 2020ರಲ್ಲಿ ಶ್ರೀಕಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಎಸ್‌ಐಟಿ ಅಧಿಕಾರಿಗಳು, ನಲಪಾಡ್‌ಗೆ ನೋಟಿಸ್ ಜಾರಿ ಮಾಡಿದ್ದರು. ಅರಮನೆ ರಸ್ತೆ ಸಿಐಡಿ ಆವರಣದಲ್ಲಿ ಇರುವ ಎಸ್‌ಐಟಿ ಘಟಕಕ್ಕೆ ನಲಪಾಡ್ ವಿಚಾರಣೆಗೆ ಹಾಜರಾಗಿದ್ದು, ಸತತ ಮೂರು ತಾಸು ವಿಚಾರಣೆ ನಡೆಸಿದ ಅಧಿಕಾರಿಗಳು ಕರೆದಾಗ ಮತ್ತೆ ಬರುವಂತೆ ನೋಟಿಸ್ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
2020ರ ನ.4ರಂದು ಡಾರ್ಕ್ ನೆಟ್‌ನಲ್ಲಿ ಡ್ರಗ್ಸ್ ಪಾರ್ಸೆಲ್‌ನ್ನು ಚಾಮರಾಜಪೇಟೆ ಅಂಚೆ ಕಚೇರಿಗೆ ತರಿಸಿದ್ದ ಪ್ರಕರಣದಲ್ಲಿ ಶ್ರೀಕಿ ಸೇರಿ 7 ಆರೋಪಿಗಳು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಕುರಿತು ಕೆಂಪೇಗೌಡನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ವೇಳೆ ವೆಬ್‌ಸೈಟ್, ಆ್ಯಪ್, ಆನ್‌ಲೈನ್ ಗೇಮ್‌ಗಳನ್ನು ಹ್ಯಾಂಕ್ ಮಾಡಿರುವುದಾಗಿ ಶ್ರೀಕಿ ಒಪ್ಪಿಕೊಂಡಿದ್ದ. ಈ ಕುರಿತು ಕಾಟನ್‌ಪೇಟೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೇಸಿನಲ್ಲಿ ಮೊಹಮ್ಮದ್ ನಲಪಾಡ್ ಸೇರಿ ಹಲವರ ಹೆಸರು ಕೇಳಿಬಂದಿತ್ತು. ಶ್ರೀಕಿಯನ್ನು ಬಳಸಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ಆರೋಪ ಇತ್ತು. ಇದರ ಮೇರೆಗೆ ನಲಪಾಡ್‌ನ್ನು ಕರೆದು ವಿಚಾರಣೆ ನಡೆಸಲಾಗಿದೆ ಎಂದು ಎಸ್‌ಐಟಿ ಮೂಲಗಳು ಮಾಹಿತಿ ನೀಡಿವೆ.