ಕೊನೆಗೂ ಎಚ್ಚೆತ್ತ ಶಿಕ್ಷಣ ಇಲಾಖೆ: ಮಕ್ಕಳಿಗೆ ಶೀಘ್ರವೇ ಬಿಸಿಯೂಟ ಧಾನ್ಯ

bisiyuta
Published on

ಬೆಂಗಳೂರು: ರಾಜ್ಯದ ಶಾಲಾ ಮಕ್ಕಳ ಬಿಸಿಯೂಟ ಯೋಜನೆ ಬಂದ್ ಆಗಿರುವ ಕುರಿತು ವಿಜಯವಾಣಿ ಪ್ರಕಟಿಸಿದ್ದ ವಿಶೇಷ ವರದಿಗೆ ಎಚ್ಚೆತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ ಕಾರ್ಯಕ್ರಮದಡಿ ಶೀಘ್ರದಲ್ಲೇ ಮಕ್ಕಳಿಗೆ ಆಹಾರ ಧಾನ್ಯ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

‘ಮಕ್ಕಳಿಗಿಲ್ಲ ಬಿಸಿಯೂಟ’ ಶೀರ್ಷಿಕೆಯಡಿ ಸೋಮವಾರ ವಿಜಯವಾಣಿ ಮುಖಪುಟದಲ್ಲಿ ಪ್ರಕಟಿಸಿದ್ದ ವಿಶೇಷ ವರದಿಗೆ ಪ್ರತಿಕ್ರಿಯಿಸಿರುವ ಇಲಾಖೆ ಅಧಿಕಾರಿಗಳು, ಪ್ರಸ್ತುತ ವಿದ್ಯಾರ್ಥಿಗಳಿಗೆ 132 ದಿನಕ್ಕೆ ವಿತರಿಸಲು ಅಗತ್ಯವಿರುವಷ್ಟು ಆಹಾರ ಧಾನ್ಯ ಖರೀದಿಸಿ ಸರಬರಾಜು ಮಾಡುವ ಪ್ರಕ್ರಿಯೆಯನ್ನು ತುರ್ತಾಗಿ ಆರಂಭಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ಆಹಾರ ಧಾನ್ಯಗಳ ಸರಬರಾಜು ಮಾಡುವಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೂ (ಕೆಎಫ್​ಸಿಎಸ್​ಸಿ) ಕೋರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2020-21ನೇ ಸಾಲಿನಲ್ಲಿ ಕರೊನಾ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ಮಕ್ಕಳಿಗೆ ಬಿಸಿಯೂಟ ಬದಲಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಕಳೆದ ಜೂನ್​ನಿಂದ ಆಗಸ್ಟ್​ವರೆಗಿನ 108 ದಿನಗಳಿಗೆ ಈಗಾಗಲೇ ಎಲ್ಲ ಜಿಲ್ಲಾ ಪಂಚಾಯಿತಿ ನಿಧಿ-1ಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಧ್ಯಾಹ್ನ ಉಪಾಹಾರ ಯೋಜನೆ ಜಂಟಿ ನಿರ್ದೇಶಕ ಟಿ.ನಾರಾಯಣಗೌಡ ತಿಳಿಸಿದ್ದಾರೆ. 108 ದಿನಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಕೆಎಫ್​ಸಿಎಸ್​ಸಿ ಗೋದಾಮುಗಳಲ್ಲಿ ಏಕ ಕಾಲದಲ್ಲಿ ಸಂಗ್ರಹಿಸಲು ಕಷ್ಟವಾಗಿದ್ದರಿಂದ 2 ಹಂತದಲ್ಲಿ ವಿತರಿಸಲು ತೀರ್ವನಿಸಲಾಗಿತ್ತು. ಜೂನ್, ಜುಲೈ ಅವಧಿಯ 53 ದಿನಗಳಿಗೆ ಆಹಾರಧಾನ್ಯ ವಿತರಿಸಲಾಗಿದೆ. ಉಳಿದ 55 ದಿನಗಳ ವಿತರಣೆ ಪ್ರಗತಿಯಲ್ಲಿದೆ. 2020ರ ನವೆಂಬರ್​ನಿಂದ 2021ರ ಏಪ್ರಿಲ್​ವರೆಗಿನ 132 ಶಾಲಾ ದಿನಗಳ ವಿತರಣೆಗೆ ಈಗಾಗಲೇ ಅನುದಾನ ಬಿಡುಗಡೆ ಆಗಿದೆ. 3 ಹಂತಗಳಲ್ಲಿ ವಿತರಿಸಲು ಜಿಲ್ಲೆಗಳಿಂದ ಆಹಾರ ಧಾನ್ಯಗಳ ಬೇಡಿಕೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ನಾರಾಯಣಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net