

Bishnoi Community : ಮಹಾರಾಷ್ಟ್ರದ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ದೇಶಾದ್ಯಂತ ಭಾರಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಇದಕ್ಕೆ ಪ್ರಮುಖ ಕಾರಣ - ಈ ಕೊಲೆಯ ಹಿಂದೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಕೈವಾಡ ಇದೆ ಎಂಬುದು. ಅಲ್ಲದೆ, ಈ ಗ್ಯಾಂಗ್ನ ಮುಂದಿನ ಟಾರ್ಗೆಟ್ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಎಂಬುದು. ಆದರೆ, ಬಿಷ್ಣೋಯಿ ಸಮುದಾಯದ ಹಾಗೂ ಬಿಷ್ಣೋಯಿಗಳ ಇತಿಹಾಸದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಒಂದು ಸಣ್ಣ ಇರುವೆಯನ್ನೂ ಹಿಂಸಿಸದ, ಮರ ಹಾಗೂ ಕೃಷ್ಣಮೃಗಗಳನ್ನು ಮಕ್ಕಳಂತೆ ಪೋಷಣೆ ಮಾಡುವ ಬಿಷ್ಣೋಯಿ ಸಮುದಾಯ, ಪ್ರಾಯಶಃ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಜಗತ್ತಿನ ಮೊದಲ ಸಮುದಾಯವಾಗಿದೆ. ಈ ಸಮುದಾಯದ ವಿವರಗಳನ್ನು ವಿಜಯವಾಣಿ ಡಿಜಿಟಲ್ ವಿಭಾಗದ ಸಂಪಾದಕ ಸಿದ್ದು ಕಾಳೋಜಿ ಇಲ್ಲಿ ವಿವರಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯಿಂದ ಭೂಮಂಡಲದ ರಕ್ಷಣೆ ಬಗ್ಗೆ ಇಡೀ ಜಗತ್ತೇ ಚಿಂತಿಸುತ್ತಿದೆ. ಆದರೆ. ಬಿಷ್ಣೋಯಿಗಳು ನೂರಾರು ವರ್ಷಗಳ ಹಿಂದೆಯೇ ಪರಿಸರ ಹಾಗೂ ಪ್ರಾಣಿಗಳ ಸಂರಕ್ಷಣೆ ಮತ್ತು ಪರಿಸರ ಸಮತೋಲನದ ರೂವಾರಿಗಳಾಗಿ ಜೀವಿಸುತ್ತಿದ್ದಾರೆ. ಮರಗಳಿಗೆ ಹಾಗೂ ಕೃಷ್ಣಮೃಗದ ರಕ್ಷಣೆಗೆ ತಮ್ಮ ಜೀವಗಳನ್ನೇ ಬಲಿ ಕೊಟ್ಟ ಬಿಷ್ಣೋಯಿಗಳ ಇತಿಹಾಸ ರೋಚಕ ಹಾಗೂ ಕುತೂಹಲಕಾರಿ.
ಸುಮಾರು 300 ವರ್ಷಗಳ ಹಿಂದೆ ಜೋಧಪುರದ ಮಹಾರಾಜ ಅಭಯ್ ಸಿಂಗ್. ಮರಗಳನ್ನು ಕಡಿಯಲು ಆದೇಶಿಸಿ ಸೈನಿಕರನ್ನು ಕಳಿಸಿದಾಗ ಸುಮಾರು 363 ಬಿಷ್ಣೋಯಿಗಳು ಮರಗಳನ್ನು ಕಡಿಯುವುದನ್ನು ಪ್ರತಿಭಟಿಸಿ ಪ್ರಾಣ ತ್ಯಾಗ ಮಾಡಿದ್ದರು. ಬಿಷ್ಣೋಯಿಗಳು ಪ್ರಕೃತಿಯ ಆರಾಧಕರು. ಆಮ್ಲಜನಕವನ್ನು ನೀಡುವ ಮೂಲಕ ಮಾನವನ ಉಸಿರಾಗಿರುವ ಮರಗಳನ್ನು ಅಪಾರವಾಗಿ ಪ್ರೀತಿಸುವ ಬಿಷ್ಣೋಯಿಗಳು ಅಹಿಂಸಾವಾದಿಗಳು ಅಷ್ಟೆ ಅಲ್ಲ. ಕೃಷ್ಣಮೃಗವನ್ನು ಮಕ್ಕಳಂತೆ ಸಾಕಿ ಸಲುಹುತ್ತಾರೆ. ಮರಿ ಕೃಷ್ಣಮೃಗಗಳಿಗೆ ಬಿಷ್ಣೋಯಿ ಹೆಂಗಸರು ಮೊಲೆ ಹಾಲುಣಿಸುವ ಮೂಲಕ ಪಾಲನೆ ಮಾಡುತ್ತಾರೆ. ಈ ಪ್ರಾಣಿಗಳ ಬಗ್ಗೆ ಅವರೆಷ್ಟು ಮಾತೃವಾತ್ಸಲ್ಯ ಹೊಂದಿದ್ದಾರೆಂದು ಇದರಿಂದಲೇ ಸ್ಪಷ್ಟವಾಗುತ್ತದೆ.
ಮರಗಳನ್ನು ಕಡಿಯದಂತೆ ಹಾಗೂ ಪ್ರಾಣಿಗಳನ್ನು ಕೊಲ್ಲದಂತೆ ತಮ್ಮ ಅನುಯಾಯಿಗಳಿಗೆ ಜಂಭೇಶ್ವರಜಿ ನಿರಂತರವಾಗಿ ಬೋಧನೆ ಮಾಡುತ್ತಾರೆ. ಇದರ ಫಲವಾಗಿ ಬಿಷ್ಣೋಯಿ ಸಮುದಾಯ ಪರಿಸರ ರಕ್ಷಣೆಗೆ ತೊಡಗುತ್ತದೆ. ಪ್ರಾಕೃತಿಕ ಸಮತೋಲನದಿಂದ ಬರ ಪ್ರವಾಹದಂತಹ ವಿಕೋಪಗಳನ್ನು ತಪ್ಪಿಸಬಹುದು ಎಂದು ಜಂಭೇಶ್ವರಜಿ ಆಗಲೇ ಆರಿತಿರುತ್ತಾರೆ. ಹೀಗಾಗಿ ಪರಿಸರ ಪ್ರಾಣಿ ರಕ್ಷಣೆ ಬಿಷ್ಣೋಯಿಗಳಲ್ಲಿ ರಕ್ತಗತವಾಗಿ ಬಂದಿದೆ. ಬಿಷ್ಣೋಯಿಗಳು ಪುನರ್ಜನ್ಮದಲ್ಲಿ ನಂಬಿಕೆ ಉಳ್ಳವರಾಗಿದ್ದು, ಜಿಂಕೆಯಾಗಿ ಮರುಜನ್ಮ ಪಡೆಯುತ್ತಾರೆ ಎಂದು ಬಲವಾಗಿ ನಂಬಿದ್ದಾರೆ. ಪ್ರಾಣಿಗಳನ್ನು ಕೊಂದರೆ ನಿಮ್ಮ ಸಾವು ಅತ್ಯಂತ ಭೀಕರವಾಗಿರುತ್ತದೆ ಎಂದು ಜಂಬೇಶ್ವರ ಧರ್ಮಗುರುಗಳು ಬೋಧಿಸಿದ್ದಾರೆ. ಅಷ್ಟೇ అల్ల, ಕೃಷ್ಣಮೃಗದ ರೂಪದಲ್ಲಿ ನಾನು ನಿಮ್ಮೊಂದಿಗಿರುತ್ತೇನೆ ಎಂದು ವಾಗ್ದಾನ ಮಾಡಿರುತ್ತಾರೆ. ಹೀಗಾಗಿ ಬಿಷ್ಣೋಯಿಗಳು ಕೃಷ್ಣಮೃಗವನ್ನು ದೇವರೆಂದೇ ಪೂಜಿಸುತ್ತಾರೆ ಹಾಗೂ ಜಂಭೇಶ್ವರರ ಅವತಾರ ಎಂದು ನಂಬಿದ್ದಾರೆ.
ಬಿಷ್ಣೋಯಿಗಳು ಅಪಾರ ಪರಿಸರ ಕಾಳಜಿ ಹೊಂದಿದವರು 1730ರಲ್ಲಿ ಜೋಧಪುರ ಮಹಾರಾಜ ಅಭಯ್ಸಿಂಗ್ ಆರಮನೆಯನ್ನು ಕಟ್ಟಲು ಮರಗಳು ಬೇಕಾದಾಗ ರಾಜಸ್ಥಾನ ಥಾರ್ ಮರುಭೂಮಿಯಲ್ಲಿ ಬೆಳೆಯುವ ಬೇಜಿ ಮರಗಳನ್ನು ಕಡಿದುಕೊಂಡು ಬರಲು ತನ್ನ ಸೈನಿಕರಿಗೆ ಆದೇಶಿಸುತ್ತಾನೆ. ಸೈನಿಕರು ಮರ ಕಡಿಯಲು ಹೋದಾಗ ಬಿಷ್ಣೋಯಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತದೆ. ಸೈನಿಕರು ಮರ ಕಡಿಯಲು ಗ್ರಾಮಕ್ಕೆ ಬಂದ ಸಂದರ್ಭಲ್ಲಿ ಮೊದಲು ಪ್ರತಿಭಟಿಸಿದವಳು ಪ್ರತಿಮಾ ದೇವಿ ಎಂಬ ಹೆಣ್ಣುಮಗಳು. ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯಲು ಬಿಡುವುದಿಲ್ಲ. ನನ್ನ ಪ್ರಾಣ ಹೋದರೂ ಸರಿ ಎಂದು ಹಟ ಹಿಡಿಯುತ್ತಾಳೆ. ಆದರೂ ಸೈನಿಕರು ಮರ ಕಡಿಯಲು ಮುಂದಾದಾಗ ಮರಗಳನ್ನು ತಬ್ಬಿಕೊಂಡು ಪ್ರತಿಭಟಿಸುತ್ತಾಳೆ. ನಿರ್ದಯಿ ಸೈನಿಕರ ಖಡ್ಗದ ಏಟಿಗೆ ಪ್ರತಿಮಾ ದೇವಿಯ ರುಂಡ ದೇಹದಿಂದ ಬೇರ್ಪಟ್ಟು ಅವಳು ಪ್ರಾಣತ್ಯಾಗ ಮಾಡುತ್ತಾಳೆ. ನಂತರ ಅವಳ ಮೂವರೂ ಹೆಣ್ಣು ಮಕ್ಕಳು ಕೂಡ ತಾಯಿಯಂತೆ ಪ್ರತಿಭಟಿಸಿ ಸಾವನ್ನಪ್ಪುತ್ತಾರೆ. ಅಪ್ಪರೊಳಗೆ ಈ ವಿಷಯ ಬಿಷ್ಣೋಯಿ ಸುತ್ತಮುತ್ತಲಿನ ಸುಮಾರು 83 ಗ್ರಾಮಗಳಿಗೆ ಹಬ್ಬಿ ಸಾವಿರಾರು ಜನರು ಬಿಷ್ಣೋಯಿ ಗ್ರಾಮಕ್ಕೆ ಧಾವಿಸಿ ಬಂದು ಮರಗಳನ್ನು ತಬ್ಬಿಕೊಂಡು ರಕ್ಷಣೆಗೆ ಮುಂದಾಗುತ್ತಾರೆ. ಗಂಡಸರು, ಹೆಂಗಸರು, ಮಕ್ಕಳು ಎನ್ನದೆ ಬಿಷ್ಣೋಯಿಗಳ ರುಂಡ ಚೆಂಡಾಡುತ್ತಾರೆ ಸೈನಿಕರು. ಕೊನೆಗೆ ಈ ವಿಷಯ ಮಹಾರಾಜ ಅಭಯ್ ಸಿಂಗ್ ತಲುಪುತ್ತದೆ. ಮಹಾರಾಜ, ತನ್ನ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಲು ಒಪ್ಪುತ್ತಾನೆ. ಮರಗಳ ಮಾರಣಹೋಮ ನಿಲ್ಲಿಸಿ, ಬೇಟ್ಲಿ ಪ್ರದೇಶವನ್ನು ಪರಿಸರ ಸಂರಕ್ಷಿತ ವಲಯ ಎಂದು ಘೋಷಿಸುತ್ತಾನೆ. ಮಾತ್ರವಲ್ಲ, ತಾಮ್ರ ಪತ್ರದಲ್ಲಿ ಬರೆದು ಶಾಸನ ರೂಪಿಸುತ್ತಾನೆ. ಹೀಗೆ ನೂರಾರು ಬಿಷ್ಣೋಯಿಗಳು ಮರಗಳ ರಕ್ಷಣೆ ಸಲುವಾಗಿ ಪ್ರಾಣತ್ಯಾಗ ಮಾಡುತ್ತಾರೆ. ಇತಿಹಾಸದಲ್ಲಿ ಇದು ಮುಂದೆ ಖೇಜರ್ಲಿ ಹಕ್ಕಾಕಾಂಡ ಎಂದೇ ದಾಖಲಾಗುತ್ತದೆ. ಸರ್ ಸಾಂತೇ ರೂಂಕ್ ರಹೇ ತೊ ಬಿ ಸಸ್ತೋ ಜಾನ್ ಎಂದು ಕೂಗುತ್ತ ಪ್ರಾಣ ಬಿಡುತ್ತಾಳೆ ಪ್ರತಿಮಾದೇವಿ. ಅಂದರೆ ಕಡಿದ ಮರದ ತುಂಡುಗಳಿಗಿಂತ ರುಂಡ ಮಿಗಿಲಲ್ಲ. ಮರಗಳ ರಕ್ಷಣೆಗೆ ನೂರಾರು ಜನರು ಬಲಿದಾನ ಮಾಡಿದ ಪ್ರಕರಣ ಇತಿಹಾಸದಲ್ಲಿ ಮತ್ತೊಂದು ಸಿಗಲಿಕ್ಕಿಲ್ಲ. ಮುಂದೆ ಸುಮಾರು 254 ವರ್ಷಗಳ ನಂತರ 1970ರಲ್ಲಿ ಚಿಪ್ಪೋ ಚಳವಳಿಗೆ ಬಿಷ್ಣೋಯಿಗಳ ಈ ಹೋರಾಟವೇ ಸ್ಫೂರ್ತಿಯಾಯಿತು.
ಭಾರತೀಯ ಕೃಷಿ ಸಂಶೋಧನಾ ಕೌನ್ಸಿಲ್ ಪ್ರಕಾರ, ಬೇದ್ರೆ ಮರಗಳು ಬರ ನಿಗ್ರಹ ಮರಗಳಾಗಿದ್ದು, ಮಣ್ಣು ಸವಕಳಿ ಆಗದಂತೆ ತಡೆಯುತ್ತವೆ. ಅಷ್ಟೆ ಅಲ್ಲ ಮಣ್ಣಿನ ಫಲವತ್ತತೆ ಹೆಚ್ಚಿಸುವ ಗುಣವನ್ನೂ ಹೊಂದಿವೆ. ಮರುಭೂಮಿಯ ಕಠಿಣ ಹವಾಗುಣದಲ್ಲೂ ವರ್ಷದ 365 ದಿನಗಳೂ ಹಚ್ಚ ಹಸಿರಾಗಿರುವ ವಿಶಿಷ್ಟ ಗುಣ ಹೊಂದಿರುವ ಈ ಮರಗಳು, ಪರಿಸರ ಸಮತೋಲನ ಕಾಯ್ದುಕೊಳ್ಳಲು ಪ್ರಯೋಜನಕಾರಿಯಾಗಿವೆ. ಜಾನುವಾರುಗಳಿಗೆ ಮೇವು, ಚೆಟ್ಟಿ, ಉಪ್ಪಿನಕಾಯಿ ಹಣ್ಣು ನೀಡುವ ಈ ಬೇಟ್ರಿ ಮರಗಳು ಔಷಧೀಯ ಗುಣಗಳನ್ನೂ ಹೊಂದಿವೆ. ಹೀಗಾಗಿ, ಮರುಭೂಮಿ ಜನರ ಜೀವನಾಡಿಯಾಗಿವೆ ಈ ಬೇಟ್ಲಿ ಮರಗಳು. ಈ ಮರಗಳನ್ನು ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡುತ್ತ ಬಂದಿದೆ ಬಿಷ್ಣೋಯಿ ಸಮುದಾಯ. ಇದು ಅವರಲ್ಲಿ ಒಂದು ಸಂಪ್ರದಾಯದಂತೆ ಬೆಳೆದು ಬಂದಿರುವುದು ವಿಶಿಷ್ಟ, ಹೀಗಾಗಿ ಅವರು ಬೇಟ್ರಿ ಮರಗಳನ್ನು ಕೇವಲ ಒಂದು ಸಂಪನ್ಮೂಲವಾಗಿ ನೋಡದೇ ದೇವರ ಕೊಡುಗೆ ಎಂದು ನಂಬಿದ್ದಾರೆ. ಇಂತಹ ಮರಗಳನ್ನು ಮಹಾರಾಜ ಆಭಯ ಸಿಂಗ್ ಕಡಿಯಲು ಆದೇಶಿಸಿದಾದ ಪ್ರಾಣದ ಹಂಗು ತೊರೆದು ಹೋರಾಡಿದರು ಬಿಷ್ಣೋಯಿಗಳು.
ದಕ್ಷಿಣ ರಾಜಸ್ಥಾನದಲ್ಲಿ ನೆಲೆಸಿರುವ ಬಿಷ್ಣೋಯಿ ಸಮುದಾಯದ ಧರ್ಮಗುರು ಜಂಭಜಿ, ಜಂಭೇಶ್ವರಣೆ ಎಂದೇ ಜನಜನಿತ. 1451-1535ರಲ್ಲಿ ಜೀವಿಸಿದ್ದ ಈ ಧರ್ಮಗುರು ಹಾಕಿಕೊಟ್ಟ 29 ಸಂಸ್ಕಾರಗಳನ್ನು ಬಾಚೂ ತಪ್ಪದೇ ಪಾಲಿಸುತ್ತಾರೆ ಈ ಸಮುದಾಯದ ಜನರು. ಅದರಲ್ಲಿ ಪ್ರಮುಖವಾದ ಒಂದು ನಿಯಮ ಅಂದರೆ, ಹಸಿರು ಮರಗಳನ್ನು ಕಡಿಯಬಾರದು ಹಾಗೂ ಪ್ರಾಣಿ ಹತ್ಯೆ ಮಾಡಬಾರದು ಎನ್ನುವುದಾಗಿದೆ. ಇನ್ನುಳಿದ 28 ನಿಯಮಗಳು ಬಹುತೇಕ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ನೀತಿ ನಿಯಮಾವಳಿಗಳಾಗಿವೆ. ಜಂಭೇಶ್ವರಜಿ ಜೀವಿತಾವಧಿಯಲ್ಲಿ ರಾಜಸ್ಥಾನದಲ್ಲಿ ಭೀಕರ ಬರಗಾಲ ಬಿದ್ದು, ನೀರು, ಆಹಾರ ಇಲ್ಲದೇ ಜೀವಸಂಕುಲ ಅಪಾರ ತೊಂದರೆಗೀಡಾಗಿತ್ತು. ಇದರಿಂದ ಆಘಾತಕ್ಕೊಳಗಾದ ಜಂಭೇಶ್ವರ ಗುರುಗಳು ಪರಿಸರ ಹಾಗೂ ಪ್ರಾಣಿಗಳ ರಕ್ಷಣೆಯ ಶಪಥ ಮಾಡಿದರು. ಮರಗಳು ಹಾಗೂ ಪ್ರಾಣಿಗಳೇ ಸರ್ವೋಚ್ಚ, ಅವುಗಳೇ ದೇವರು ಎಂದು ಬಲವಾಗಿ ನಂಬಿ ಅವುಗಳ ರಕ್ಷಣೆಗೆ ಕಂಕಣ ಕಟ್ಟುತ್ತಾರೆ. ಈ ಬಗ್ಗೆ ಅಮೆರಿಕದ ಖ್ಯಾತ ಲೇಖಕ ರೋಜರ್ ಎಸ್. ಗೋಟ್ ಲಿಟ್. ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.
1730ರಲ್ಲಿ ಜೋಧಪುರದಿಂದ ಕೇವಲ 25 ಕಿಲೋಮೀಟರ್ ದೂರದ ಜಂಭೇಶ್ವರಜಿ ಗ್ರಾಮದಲ್ಲಿ ನಡೆದಿತ್ತು ಈ ಹತ್ಯಾಕಾಂಡ. 350 ವರ್ಷಗಳ ಹಿಂದೆ ಮಹಾರಾಜ ಅಭಯ್ ಸಿಂಗ್ ತನ್ನ ಅರಮನೆ ಕಟ್ಟಲು ಇಟ್ಟಿಗೆ ಭಟ್ಟಿಗಳಿಗೆ ಉರುವಲು ಬೇಕಾದಾಗ ಸಮೀಪದ ಗ್ರಾಮದಿಂದ ಮರ ಕಡಿದು ತರಲು ಆದೇಶಿಸುತ್ತಾನೆ. ಈ ಬಗ್ಗೆ ಇತಿಹಾಸಕಾರರಾದ ರಾಮಚಂದ್ರ ಗುಹಾ ಹಾಗು ಮಾಧವ್ ಗಾಡ್ಲಿಲ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಉನಿ ನದಿಗುಂಟ ವಿಪುಲವಾಗಿ ಬೆಳೆದ ಬೇಟ್ರಿ ಮರಗಳ ಮೇಲೆ ಸೈನಿಕರ ಕಣ್ಣು ಬೀಳುತ್ತವೆ. ಆದರೆ, ಮರಗಳನ್ನು ಕಡಿಯಲು ಬಿಷ್ಣೋಯಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತದೆ. ಆಗ ಈ ಹತ್ಯಾಕಾಂಡ ನಡೆದು. ಬಿಷ್ಣೋಯಿಗಳ ಪರಿಸರಪ್ರೇಮ ಜಗತ್ತಿಗೆ ಗೊತ್ತಾಗುತ್ತದೆ.
ಖಾಮುದಾಮ ಬಿಷ್ಣೋಯಿ ಪ್ಲಾಸ್ಟಿಕ್ ವಿರುದ್ಧ ಕಳೆದ 38 ವರ್ಷಗಳಿಂದ ಅಂದೋಲನ ಸಾರಿದ್ದಾರೆ. ಇವರ ಹೆಸರಲ್ಲಿ 'ಎಕ್ಟ್ರಾರ್ಡಿನರಿ ಮ್ಯಾನ್ ಆಫ್ ಇಂಡಿಯಾ' ಪ್ರಶಸ್ತಿ ಇದೆ. ಪೀಠಾ ರಾಮ ಬಿಷ್ಣೋಯಿ ಪಂಕ್ಚರ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದರೂ ಇದುವರೆಗೆ 2 ಸಾವಿರಕ್ಕೂ ಅಧಿಕ ಪ್ರಾಣಿಗಳಿಗೆ ಪುನರ್ವಸತಿ ಕಲ್ಪಿಸಿದ್ದಾರೆ. ಅನಿಲ್ ಬಿಷ್ಣೋಯಿ, ವನ್ಯಮೃಗಗಳ ಬೇಟೆಗಾರದ ವಿರುದ್ಧ 200ಕ್ಕೂ ಹೆಚ್ಚು ಕೇಸ್ಗಳನ್ನು ಫೈಲ್ ಮಾಡಿದ್ದಾರೆ. ಕೃಷ್ಣಮೃಗ ರಕ್ಷಣೆಗೆ ಕಳೆದ 30 ವರ್ಷಗಳಿಂದ ಟೊಂಕ ಕಟ್ಟಿ ನಿಂತಿದ್ದಾರೆ. ಅದಕ್ಕಾಗೇ 1995ರಲ್ಲಿ ಹಮ್ ಸಾಥ್ ಸಾಥ್ ಹೈ ಸಿನೆಮಾ ಶೂಟಿಂಗ್ ಎರಡು ಕೃಷ್ಣಮೃಗಗಳನ್ನು ಕೊಂದ ಆರೋಪ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲಿದ್ದು, ಅವನ ಹಿಂದೆ ಬಿದ್ದಿರುವುದು ಇದೇ ಸಮುದಾಯಕ್ಕೆ ಸೇರಿದ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ.
ಮೂರು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಭಜನ್ ಲಾಲ್. ಅಂತಾರಾಷ್ಟ್ರೀಯ ಕ್ರಿಕೆಟಿಗೆ ರವಿ ಬಿಷ್ಣೋಯಿ, ಕುಸ್ತಿಯಲ್ಲಿ ಕಾಮನ್ ವೆಲ್ತ್ ಪದಕ ವಿಜೇತೆ ಕಿರಣ್ ಬಿಷ್ಣೋಯಿ ಸೇರಿ ಹಲವರು ಖ್ಯಾತಿ ಗಳಿಸಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸದ ನಿಹಾಲ್ ಚಂದ್ ಬಿಷ್ಣೋಯಿ 1996ರಲ್ಲಿ ರಾಜಸ್ಥಾನದ ಬಿಕನೇರ್ನಲ್ಲಿ ಜಿಂಕೆಗಳ ಹತ್ಯೆ ತಡೆಯಲು ಬೇಟೆಗಾರರೊಂದಿಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ. ಹಲವಾರು ಜಿಂಕೆಗಳ ಪ್ರಾಣ ಉಳಿಸಿದರೂ 6 ಜಿಂಕೆಗಳು ಸಾವನ್ನಪ್ಪುತ್ತವೆ. ನಿಹಾಲ್ ಕೂಡ ಬಲಿಯಾಗುತ್ತಾನೆ. ಅವರ ಈ ಸಾಹಸಕ್ಕಾಗಿ ಭಾರತ ಸರ್ಕಾರ, ಶೌರ್ಯ ಚಕ್ರ ನೀಡಿದೆ. ಯೋಧರಿಗೆ ಮಾತ್ರ ನೀಡುವ ಈ ಪ್ರಶಸ್ತಿಯನ್ನು ನಾಗರಿಕರೊಬ್ಬರಿಗೆ ನೀಡಿದ್ದು ಅದೇ ಮೊದಲು.