

ಹೈದರಾಬಾದ್: ಒಂದು ರೂಪಾಯಿಗೆ ಬಿರಿಯಾನಿ ತಿನ್ನಲು ಹೋಟೆಲ್ವೊಂದಕ್ಕೆ ಬಂದು ಪೊಲೀಸರಿಗೆ 100 ರಿಂದ 235 ರೂ.ದಂಡ ಕಟ್ಟಿರುವ ವಿಚಿತ್ರ ಘಟನೆ ಹೈದರಾಬಾದ್ನ ಕರೀಂನಗರದಲ್ಲಿ ನಡೆದಿದೆ.
ಇಲ್ಲಿನ ಗೀತಾ ಭವನದ ಎದುರು ಹೊಸ ಹೋಟೆಲ್ವೊಂದು ಆರಂಭಿಕ ಕೊಡುಗೆಯಾಗಿ 1 ರೂಪಾಯಿಗೆ 1 ಬಿರಿಯಾನಿ ಕೊಡುವುದಾಗಿ ಘೋಷಿಸಿತ್ತು. ಆದರೆ ಆ ಒಂದು ರೂಪಾಯಿ ಚಲಾವಣೆಯಲ್ಲಿರುವ ನಾಣ್ಯವಾಗಿರದೇ, ಹಳೆಯ ಒಂದು ರೂ. ನೋಟು ಆಗಿರಬೇಕು ಹಾಗೂ ಮಧ್ಯಾಹ್ನ 2.30ರ ನಂತರ ಆಫರ್ ಆರಂಭವಾಗಲಿದ್ದು, ತಲಾ ಒಂದು ಬಿರಿಯಾನಿ ಮಾತ್ರ ನೀಡುವುದಾಗಿ ಆಡಳಿತ ಮಂಡಳಿ ಷರತ್ತು ಹಾಕಿತ್ತು.
ಇದನ್ನೂ ಓದಿ: ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದ ಹೆಡ್ ಕಾನ್ಸ್ಟೆಬಲ್ ಹತ್ಯೆ ಆರೋಪಿ; ಪೊಲೀಸರಿಂದ ಗುಂಡೇಟು, ಬಂಧನ
ಕೂಡಲೇ ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಸಿಲಿನ ತಾಪವನ್ನು ಲೆಕ್ಕಿಸದೆ ಹೋಟೆಲ್ನಲ್ಲಿ ಬಿರಿಯಾನಿ ತಿನ್ನಲು ಅಪಾರ ಜನಸ್ತೋಮ ನೆರೆದಿತ್ತು. ಮೊದಮೊದಲು ಆಹಾರ ಪ್ರಿಯರು ಹೋಟೆಲ್ನ ಹೊರಗೆ ಸರತಿ ಸಾಲಿನಲ್ಲಿ ನಿಂತು ತಮ್ಮ ಪಾರ್ಸೆಲ್ಗಳನ್ನು ಒಂದೊಂದಾಗಿ ತೆಗೆದುಕೊಂಡು ಹೋಗಿದ್ದಾರೆ. ಇನ್ನು ಕೆಲವರು ಅಲ್ಲಿಯೇ ಕುಳಿತು ತಿಂದಿದ್ದಾರೆ.
ಒಂದೆರಡು ಘಂಟೆಗಳಲ್ಲೇ ಹೋಟೆಲ್ ಸುಮಾರು 250 ರಿಂದ 300 ಬಿರಿಯಾನಿಗಳನ್ನು ಮಾರಾಟ ಮಾಡಿದೆ. ಆದರೆ ಹೊರಗಿದ್ದ ಜನರು ಸುಡು ಬಿಸಿಲಿನಿಂದ ಬೇಸತ್ತು ಪಾರ್ಸೆಲ್ ನೀಡುವಂತೆ ಕೂಗಲು ಪ್ರಾರಂಭಿಸಿ, ಹೋಟೆಲ್ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿ ನಿಯಂತ್ರಣವನ್ನು ಕಳೆದುಕೊಂಡು ನೂಕುನುಗ್ಗಲು ಶುರುವಾಗಿದೆ.
ಇದನ್ನೂ ಓದಿ: VIDEO| ನಮ್ಮ ಹೋರಾಟ ಏನಿದ್ದರೂ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ: ಕುಸ್ತಿಪಟುಗಳು
ಅಲ್ಲದೇ, ಹೋಟೆಲ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಜನರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರಿಂದ ಟ್ರಾಫಿಕ್ ಸಮಸ್ಯೆಯೂ ಉಂಟಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡದಿರುವ ಬೈಕ್ ಮಾಲೀಕರಿಗೆ 100 ರಿಂದ 235 ರೂ.ವರೆಗೆ ದಂಡ ಹಾಕಿದ್ದಾರೆ. ಜತೆಗೆ ಪೊಲೀಸರು ಹೋಟೆಲ್ ಮಾಲೀಕರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.(ಏಜೆನ್ಸೀಸ್)