

ಗದಗ: ಬರ್ತ್ ಡೇ ನೆಪದಲ್ಲಿ ಕೋವಿಡ್-19 ನಿಯಮ ಉಲ್ಲಂಘಿಸಿ ಭರ್ಜರಿಯಾಗಿ ಗುಂಡು-ತುಂಡಿನ ಪಾರ್ಟಿ ಮಾಡಿದ್ದ ಬಿಜೆಪಿ ಮುಖಂಡ ಎಸ್.ಎಚ್. ಶಿವನಗೌಡರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಆರೋಗ್ಯ ಸಚಿವ ಶ್ರೀರಾಮುಲು ಅವರ ಆಪ್ತವಯಲದಲ್ಲಿ ಗುರುತಿಸಿಕೊಂಡಿದ್ದ ಶಿವನಗೌಡ ನಗರದ ಶ್ರೀನಿವಾಸ ಭವನದಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಪಾಲ್ಗೊಂಡ ಜನರು ಮಾಸ್ಕ್ ಧರಿಸದೆ, ಪರಸ್ಪರ ಅಂತರವನ್ನೂ ಪಾಲಿಸದೆ ''ಎಣ್ಣೆ'' ನಶೆಯಲ್ಲಿ ಕುಣಿದು ಕುಪ್ಪಳಿಸಿದ್ದರು. ಇದನ್ನೂ ಓದಿರಿ ಇಡೀ ರಾಜ್ಯ ಲಾಕ್ಡೌನ್?
ಸಾಮಾಜಿಕ ಅಂತರ ಮರೆತು ಪಾರ್ಟಿಯಲ್ಲಿ ಇನ್ನೂರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು ಎನ್ನಲಾಗಿದೆ. ಕರೊನಾ ಸಂಕಷ್ಟ ಸಂದರ್ಭದಲ್ಲಿ ಪಾರ್ಟಿ ಬೇಕಿತ್ತಾ? ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಶಿವನಗೌಡನನ್ನು ಪಕ್ಷದಿಂದ ಅಮಾನತು ಮಾಡಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಕರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಜನ ಗುಂಪು ಸೇರದಂತೆ, ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿದೆ. ಆದರೆ, ಈ ನಿಯಮವನ್ನು ಆರೋಗ್ಯ ಸಚಿವರ ಆಪ್ತನೇ ಉಲ್ಲಂಘಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗುರಿಯಾಗಿತ್ತು.
'ಕಾರ್ಯಕ್ರಮ ಆಯೋಜಿಸಿದ್ದು ನಾನಲ್ಲ, ಸ್ನೇಹಿತರು ಏರ್ಪಡಿಸಿದ್ದರು. ಅಲ್ಲಿಗೆ ನಾನು ಹೋಗಿದ್ದೆ' ಎಂದು ಶಿವನಗೌಡ ಸ್ಪಷ್ಟನೆ ನೀಡಿದ್ದರು.