

ಪಾಂಚಜನ್ಯ ಶಂಖವನ್ನು ಸ್ವೀಕರಿಸಿದ ಶ್ರೀಕೃಷ್ಣ ಆ ಶಂಖವನ್ನು ನಾದ ಮಾಡುತ್ತ ನೇರವಾಗಿ ಯಮದೇವರ ಪಟ್ಟಣಕ್ಕೆ ಹೋದ. ಜೋರಾಗಿ ಶಂಖಧ್ವನಿಯನ್ನು ಮಾಡಿದ ಕೂಡಲೇ ಯಮದೇವರು ಓಡಿ ಬಂದರು. ಪಾಂಚಜನ್ಯ ಇದೇ ಮೊದಲಿಗೆ ಸಿಕ್ಕಿದ್ದು ಎಂದಲ್ಲ. ಆದರೆ ಶ್ರೀಕೃಷ್ಣ ಶಂಖವನ್ನು ಊದಿದರೆ ಯಮದೇವರು ಶ್ರೀಕೃಷ್ಣನ ಶಂಖವೇ ಇದು ಎಂದು ಭಾವಿಸಿ ನೇರವಾಗಿ ಕೃಷ್ಣ ಪರಮಾತ್ಮನ ಪಾದಕ್ಕೆ ಬೀಳುತ್ತಾರೆ.
ನನ್ನಿಂದ ಏನು ಆಗಬೇಕು ಎಂದು ಕೇಳುತ್ತಾರೆ. ‘ನನ್ನ ಗುರುಪುತ್ರನನ್ನು ಕೊಡು ನಾನು ಅವನನ್ನು ಕರೆದುಕೊಂಡು ಹೋಗುತ್ತೇನೆ’ ಎನ್ನುತ್ತ ಗುರುಪುತ್ರರನ್ನು ಪರಮಾತ್ಮ ರಕ್ಷಣೆ ಮಾಡುತ್ತಾನೆ. ಆ ಗುರುಪುತ್ರನನ್ನು ಕರೆದುಕೊಂಡು ಬಂದು ಗುರುಪತ್ನಿಗೆ ಒಪ್ಪಿಸುತ್ತಾನೆ. ಗರ್ಭದೊಳಗೆ ಇದ್ದ ಪರೀಕ್ಷಿತನನ್ನು ರಕ್ಷಣೆ ಮಾಡಿದ, ಹುಟ್ಟಿದ ಮೇಲೆ ಮೃತನಾದ ಆ ಪರೀಕ್ಷಿತನನ್ನು ಮತ್ತೆ ರಕ್ಷಣೆ ಮಾಡಿದ ಶ್ರೀಕೃಷ್ಣ ಸತ್ತು ಯಮನಪುರ ಸೇರಿದ ಗುರುಪುತ್ರನನ್ನು ಮತ್ತೆ ಬದುಕಿಸಿ ಅವರ ತಂದೆತಾಯಿಗೆ ಒಪ್ಪಿಸಿದ್ದಾನೆ. ಹುಟ್ಟು ಸಾವಿನ ನಿಯಮ ಎಲ್ಲರಿಗೂ ಸ್ವಾಭಾವಿಕವಾದರೂ ಅವು ನನ್ನ ಅಧೀನ. ನಾನು ಅದನ್ನು ಮೀರಬಲ್ಲೆ ಎಂಬುದನ್ನು ಸತ್ತವರನ್ನು ಹುಟ್ಟಿಸುವ ಮೂಲಕ ಶ್ರೀಕೃಷ್ಣ ತೋರಿಸಿದ್ದಾನೆ.