ಇನ್ನೂ ನಾಲ್ಕು ದಿನ ಮೀನುಗಾರರು ಸಮುದ್ರಕ್ಕೆ ಇಳಿಯದಿರಿ! ಹವಾಮಾನ ಇಲಾಖೆ ಮುನ್ಸೂಚನೆ…

#CycloneMandous #Rain
Published on

ಬೆಂಗಳೂರು: ಹವಾಮಾನ ವೈಪರಿತ್ಯದಿಂದಾಗಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಮೋಚಾ ಸೈಕ್ಲೋನ್ ನಂತರ ಬಿಪರ್‌ಜಾಯ್ ಚಂಡಮಾರುತ ಸೃಷ್ಟಿಯಾಗಿದೆ.

ಬಿಪರ್‌ಜಾಯ್ ಚಂಡಮಾರುತದ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಜೋರು ಮಳೆ ಉಂಟಾಗುವ ಸಾಧ್ಯತೆ ಇದೆ. ಕರ್ನಾಟಕದ ವಿವಿಧೆಡೆ ನಾಳೆಯಿಂದ ಜೂನ್ 10ರವರೆಗೆ ಮೂರು ದಿನ ಜೋರು ಮಳೆಯಾಗುವ ಸಾಧ್ಯತೆ ಇದ್ದು ಈ ಸೈಕ್ಲೋನ್‌ ವೇಗ ಆರಂಭದಲ್ಲಿ ಪ್ರತಿ ಗಂಟೆಗೆ 45-55 ಕಿಲೋ ಮೀಟರ್ ಇರಲಿದೆ. ನಂತರ ಸೈಕ್ಲೋನ್ ಗಾಳಿ ಗರಿಷ್ಠ 145-155 ಕಿಲೋ ಮೀಟರ್‌ವರೆಗೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕದ ದಕ್ಷಿಣ ಒಳನಾಡು(ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆ), ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ (ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ) ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ (ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಬೀದರ್, ಬಳ್ಳಾರಿ, ಧಾರವಾಡ, ಹಾವೇರಿ, ಗದಗ, ಗುಲ್ಬರ್ಗಾ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆ) ಹಲವು ಭಾಗಗಳಲ್ಲಿ ಮೋಡ ಚದುರಿದಂತೆ ಸಾಧಾರಣ ಮಳೆ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ 2-3 ದಿನ ಮಳೆ ಜೊತೆಗೆ ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಸಾಧ್ಯತೆ ಇದ್ದು ಈ ಕುರಿತಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ.

4 ದಿನ ಮೀನುಗಾರಾರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

ಚಂಡಮಾರುತದ ಹಿನ್ನೆಲೆ 4 ದಿನ ತಡವಾಗಿ ಕೇರಳವನ್ನು ಪ್ರವೇಶ ಮುಂಗಾರು ಮಾಡಲಿದೆ. ಚಂಡಮಾರುತ ಶುರುವಾಗಿರುವ ಹಿ‌ನ್ನೆಲೆಯಲ್ಲಿ, ಮುಂಗಾರು ಕೂಡ ಪ್ರಬಲವಾಗಿರದೇ ದುರ್ಬಲವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಂಡಮಾರುತದ ಜತೆಗೆ ಮುಂಗಾರು ಮಾರುತಗಳೂ ಇರುವ ಕಾರಣ 4 ದಿನ ಮೀನುಗಾರಾರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net