

ಕ್ರಿಕೆಟ್‌ಗೂ ಸಿನಿಮಾ ರಂಗಕ್ಕೂ ಉತ್ತಮ ನಂಟಿದೆ. ಕ್ರಿಕೆಟ್ ಸಾಧಕರ ಕುರಿತ ಚಿತ್ರಗಳನ್ನು ತೆರೆ ಮೇಲೆ ತರುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಈಗಾಗಲೇ ಸಚಿನ್, ಎಂ.ಎಸ್.ಧೋನಿ, ಮುತ್ತಯ್ಯ ಮುರುಳೀಧರನ್ ಹಾಗೂ ಅಜರುದ್ದೀನ್ ಸೇರಿ ಹಲವು ಕ್ರಿಕೆಟಿಗರ ಬಯೋಪಿಕ್ ಬಂದಿವೆ. ಇದೀಗ ಈ ಸಾಲಿಗೆ ಯುವರಾಜ್ ಸಿಂಗ್ ಹೊಸ ಸೇರ್ಪಡೆ. ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಅಲ್ರೌಂಡರ್, ಅವಳಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಜೀವನವನ್ನಾಧರಿಸಿ ಚಿತ್ರ ನಿರ್ಮಿಸಲು ಟಿ-ಸಿರೀಸ್ ಸಂಸ್ಥೆ ಮುಂದೆ ಬಂದಿದೆ. ಇತ್ತೀಚೆಗಷ್ಟೇ ನಿರ್ಮಾಪಕರಾದ ಭೂಷಣ್ ಕುಮಾರ್ ಹಾಗೂ ರವಿ ಯುವರಾಜ್ ಸಿಂಗ್ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಇದಕ್ಕೆ ಯುವಿ ಒಪ್ಪಿಗೆ ನೀಡಿದ ಬೆನ್ನಲ್ಲೇ ಸಿನಿಮಾ ೋಷಿಸಲಾಗಿದೆ. ‘ನನ್ನ ಬದುಕಿನ ಕಥೆಯನ್ನು ಲಕ್ಷಾಂತರ ಅಭಿಮಾನಿಗಳಿಗೆ ತೋರಿಸಲು ಮುಂದೆ ಬಂದಿರುವ ಭೂಷಣ್ ಹಾಗೂ ರವಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಜೀವನದ ಎಲ್ಲ ಏರಿಳಿತಗಳ ಮಧ್ಯೆ ಕ್ರಿಕೆಟ್‌ಅನ್ನು ಪ್ರೀತಿಸುತ್ತೇನೆ. ಈ ಸಿನಿಮಾ ಇಂದಿನ ಯುವಕರಿಗೆ ಸ್ಫೂರ್ತಿಯಾಗಲಿದ್ದು, ಜತೆಗೆ ಸವಾಲುಗಳನ್ನು ಜಯಿಸಲು, ಕಂಡ ಕನಸನ್ನು ಈಡೇರಿಸಿಕೊಳ್ಳಲು ಮಾದರಿಯಾಗಲಿದೆ’ ಎಂದಿದ್ದಾರೆ. ಈ ಸುದ್ದಿಯು ಯುವಿ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದ್ದು, ನೆಚ್ಚಿನ ಕ್ರಿಕೆಟಿಗನ ಬದುಕನ್ನು ತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ. -ಏಜೆನ್ಸೀಸ್
ಚಿತ್ರದಲ್ಲಿ ಏನಿರಲಿದೆ?: 2000ರಲ್ಲಿ ಕೀನ್ಯಾದ ಎದುರು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಯುವರಾಜ್, ಭಾರತ ತಂಡ 2007ರ ಟಿ-20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟಿ-20 ವಿಶ್ವಕಪ್‌ನಲ್ಲಿ ಆರು ಬಾಲ್‌ಗೆ ಆರು ಸಿಕ್ಸ್ ಬಾರಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದರು. ಈ ನಡುವೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಯುವಿ ಮೈದಾನದಾಚೆಗೂ ಹೋರಾಟ ನಡೆಸಿ ಗುಣಮುಖರಾಗಿದ್ದರು. ಕೊನೆಗೆ 2017ರಲ್ಲಿ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. 17 ವರ್ಷಗಳ ಕ್ರೀಡಾ ಬದುಕಿನಲ್ಲಿ ಯುವರಾಜ್ ಹಲವಾರು ಏಳು-ಬೀಳುಗಳನ್ನು ಕಂಡು ಅದರ್ಶವಾಗಿದ್ದಾರೆ. ಇಂತಹ ಶ್ರೇಷ್ಠ ಆಟಗಾರನ ಬದುಕು, ಮಹತ್ವದ ಪಂದ್ಯಗಳು, ಅವಳಿ ವಿಶ್ವಕಪ್‌ನಲ್ಲಿ ವಹಿಸಿದ ಪ್ರಮುಖ ಪಾತ್ರದ ಜತೆಗೆ ಅತಿಮುಖ್ಯವಾಗಿ ಕ್ಯಾನ್ಸರ್ ವಿರುದ್ಧ ನಡೆಸಿದ ಹೋರಾಟದ ಸುತ್ತ ಈ ಸಿನಿಮಾ ಮೂಡಿಬರಲಿದೆ. ಇನ್ನು ಪಾತ್ರವರ್ಗ, ತಾಂತ್ರಿಕವರ್ಗದ ಬಗ್ಗೆ ಇನ್ನಷ್ಟೇ ಘೋಷಣೆಯಾಗಬೇಕಿದೆ.
ಬೆಳ್ಳಿತೆರೆಯಲ್ಲಿ ಕ್ರಿಕೆಟಿಗರು: ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ಹಲವು ಕ್ರಿಕೆಟಿಗರ ಬದುಕನ್ನು ತೆರೆ ಮೇಲೆ ತೋರಿಸಲಾಗಿದೆ. ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ‘ಎಂ.ಎಸ್.ಧೋನಿ: ದ ಅನ್‌ಟೋಲ್ಡ್ ಸ್ಟೋರಿ’, ಸಚಿನ್ ತೆಂಡುಲ್ಕರ್ ಬಯೋಪಿಕ್ ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’, ಅಜರುದ್ದೀನ್ ಕುರಿತು ‘ಅಜರ್’, ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಜೀವನಧಾರಿತ ‘800’ ಹಾಗೂ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಕುರಿತು ‘ಶಬ್ಬಾಸ್ ಮಿಥೂ’ ಸಿನಿಮಾ ಮಾಡಲಾಗಿದೆ. ಇನ್ನು ಭಾರತ ತಂಡದ ಪ್ರಥಮ ವಿಶ್ವಕಪ್ ವಿಜಯದ ಕುರಿತು ‘83’ ಕೂಡ ರಿಲೀಸ್ ಆಗಿದೆ. ಬಯೋಪಿಕ್ ಜತೆಗೆ ‘ಲಗಾನ್’, ‘ಜೆರ್ಸಿ’, ‘ವಿಕ್ಟರಿ’, ‘ಬಿಯಾಂಡ್ ಆಲ್ ಬೌಂಡರೀಸ್’ ಹಾಗೂ ಕನ್ನಡದ ‘ಚೈತ್ರದ ಚಂದ್ರಮ’ ಸೇರಿ ಕ್ರಿಕೆಟ್ ಹಿನ್ನೆಲೆಯ ಹಲವು ಚಿತ್ರಗಳು ಮೂಡಿಬಂದಿವೆ.