

ಶಿವಮೊಗ್ಗ: ದೇಶದ ಇತಿಹಾಸದಲ್ಲಿನ ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು. ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ಜೀವನ ನಡೆಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮುಖ್ಯ ಎಂದು ಡಿಡಿಪಿಯು ಬಿ.ಕೃಷ್ಣಪ್ಪ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಪದವಿಪೂರ್ವ (ಸ್ವತಂತ್ರ) ಕಾಲೇಜಿನಿಂದ ಶನಿವಾರ ಏರ್ಪಡಿಸಿದ್ದ 2023-24 ನೇ ಸಾಲಿನ ಪ್ರತಿಭಾ ಪುರಸ್ಕಾರ, 2024-25ನೇ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ, ಸಾಂಸ್ಕೃತಿಕ ವೇದಿಕೆ, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಅಗತ್ಯ ಪ್ರೋತ್ಸಾಹ ನೀಡಬೇಕು. ಶ್ರೇಷ್ಠ ಸಾಧಕರ ಜೀವನ ಚರಿತ್ರೆಯು ಯುವ ಸಮೂಹಕ್ಕೆ ಪ್ರೇರಣಾ ಶಕ್ತಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಸಾಧಕರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ್ ಮಾತನಾಡಿ, ಶಿಕ್ಷಣದ ಜತೆಗೆ ಸದೃಢ ಭವಿಷ್ಯ ರೂಪಿಸಿಕೊಳ್ಳುವ ಕೌಶಲ ಅಗತ್ಯ. ವಿದ್ಯಾರ್ಥಿಗಳು ಶಿಕ್ಷಣದ ನಂತರ ಆಯ್ಕೆ ಮಾಡುವ ವಿಷಯದಲ್ಲಿ ವಿಶೇಷ ಜಾಗೃತಿ ವಹಿಸಬೇಕು. ಸಾಧನೆ ಹಾದಿಯಲ್ಲಿ ಮುನ್ನಡೆಯಲು ಅಗತ್ಯವಿರುವ ಜೀವನಶೈಲಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಸ್ವತಂತ್ರ ಹೋರಾಟಗಾರರ ಆಶಯದಂತೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಮ್ಮ ಸಂಸ್ಥೆ ಶ್ರಮಿಸುತ್ತಿದೆ. ಈ ಬಾರಿ ನಮ್ಮ ಸಂಸ್ಥೆಯ ಸ್ವತಂತ್ರ ಪಿಯು ಕಾಲೇಜು 9 ರ‌್ಯಾಂಕ್ ಪಡೆದಿದೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಜತೆಯಲ್ಲಿ ಇತರರಿಗೂ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಪ್ರಾಚಾರ್ಯ ಎ.ಇ.ರಾಜಶೇಖರ್, ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಇತರರಿದ್ದರು.