

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಹರಗುಂಟೆ ಗ್ರಾಮದಲ್ಲಿ 18 ಎಕರೆಯಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾಪಿಸಲು ಗೇಲ್ ಇಂಡಿಯಾ ಲಿಮಿಟೆಡ್‌ಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡಲಾಗಿದೆ. ಬಿಬಿಎಂಪಿ ಮಾಲೀಕತ್ವದಲ್ಲಿ 10 ಎಕರೆ ಮತ್ತು ಕೆಸಿಡಿಸಿ ಸಂಸ್ಕರಣಾ ಘಟಕ ವಶದಲ್ಲಿದ್ದ 8 ಎಕರೆ ಜಮೀನನ್ನು ಗೇಲ್ ಕಂಪನಿಗೆ ಒಪ್ಪಿಸಲಾಗಿದೆ. 2022ರಲ್ಲಿ ಕೆಸಿಡಿಸಿ ಸಂಸ್ಕರಣಾ ಘಟಕಕ್ಕೆ ಬಯೋ ಗ್ಯಾಸ್ ಉತ್ಪಾದನೆಗೆಂದು 8 ಎಕರೆ ಜಮೀನು ನೀಡಲಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಹಿಂಪಡೆದು ಗೇಲ್ ಕಂಪನಿಗೆ ನೀಡಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 300 ಮೆ.ಟನ್ ಘನ ತ್ಯಾಜ್ಯವನ್ನು ಬಳಸಿಕೊಂಡು ಬಯೋ ಸಿಎನ್‌ಜಿ ಗ್ಯಾಸ್ ಉತ್ಪಾದನೆಗೆ ಸೂಚಿಸಲಾಗಿದೆ. 25 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಪ್ರಸ್ತುತ ಪ್ರತಿದಿನ 300 ಮೆಟ್ರಿಕ್ ಟನ್ ಸಾಮರ್ಥ್ಯದ ಬಯೋ ಗ್ಯಾಸ್ ಪ್ಲಾಂಟ್‌ನ್ನು ಕಾರ್ಯಕ್ಷಮತೆ ಆಧಾರದ ಮೇಲೆ ದೀರ್ಘಾವಧಿಯಲ್ಲಿ ಪ್ರತಿದಿನ 500 ಮೆಟ್ರಿಕ್ ಟನ್ ಸಾಮರ್ಥ್ಯಕ್ಕೆ ವಿಸ್ತರಣೆಗೆ ಅನುಮೋದನೆ ನೀಡಲಾಗಿದೆ. ಕಂದಾಯ ಇಲಾಖೆ ಮತ್ತು ಬಿಎಸ್‌ಡಬ್ಲೂಎಂಎಲ್ ಜಂಟಿ ಸರ್ವೇ ನಡೆಸಿ ಸೂಕ್ಷ ನಕ್ಷೆಯೊಂದಿಗೆ ಜಮೀನು ಹಸ್ತಾಂತರಿಸಬೇಕೆಂದು ಸೂಚಿಸಲಾಗಿದೆ.
ತ್ಯಾಜ್ಯ ನೀರು ಶುದ್ಧೀಕರಣ ಘಟಕ :
ಜಲ ಮಂಡಳಿ ವತಿಯಿಂದ ಬಿಡದಿ ಸಮೀಪದ ಬೈರಮಂಗಲ ಕೆರೆಯ ದಡದಲ್ಲಿ 100 ಎಂಎಲ್‌ಡಿ ಸಾಮರ್ಥ್ಯದ ದ್ವಿತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ಸ್ಥಾಪನೆಗೆ 391.82 ಕೋಟಿ ರೂ. ಅನ್ನು ನೀಡಲು ಅನುಮೋದನೆ ನೀಡಲಾಗಿದೆ. 25 ಎಂಎಲ್‌ಡಿ ಸಾಮರ್ಥ್ಯದ ತೃತೀಯ ಹಂತದ ತ್ಯಾಜ್ಯ ನೀರು ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿ ಮತ್ತು ಸದರಿ ಘಟಕಗಳ 7 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಇದರಲ್ಲಿ ಸೇರಿದೆ.