ಫಾಸಿಲ್‌ಗೆ ಜೈವಿಕ ಇಂಧನ ಪರ್ಯಾಯ: ಡಿಎಫ್‌ಒ ಸುಬ್ರಹ್ಮಣ್ಯ

jnne collage programme
ಶಿವಮೊಗ್ಗ ಜೆಎನ್‌ಎನ್‌ಇ ಕಾಲೇಜಿನಲ್ಲಿ ವಿಶ್ವ ಜೈವಿಕ ಇಂಧನ ದಿನವನ್ನು ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಕೆ.ವಿ.ಸುಬ್ರಹ್ಮಣ್ಯ ಉದ್ಘಾಟಿಸಿದರು. ಡಾ. ಎಸ್.ಜಿ.ಚೇತನ್, ಡಾ. ವೈ.ವಿಜಯಕುಮಾರ್, ಡಾ. ಎಸ್.ವಿ.ಸತ್ಯನಾರಾಯಣ, ಡಾ. ಬಿ.ಎನ್.ರವಿಕುಮಾರ್, ರಶ್ಮಿ ಇದ್ದರು.
Published on

ಶಿವಮೊಗ್ಗ: ಜೈವಿಕ ಇಂಧನಕ್ಕೆ ಪೂರಕ ಗಿಡಗಳನ್ನು ಪೋಷಿಸಿದರೆ ಗ್ರಾಮೀಣ ಭಾಗದ ಮನೆ ಮನೆಗಳಲ್ಲಿ ಜೈವಿಕ ಇಂಧನಗಳ ಉತ್ಪಾದನೆ ಸಾಧ್ಯ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಕೆ.ವಿ.ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ರಾಷ್ಟ್ರೀಯ ಶಿಕ್ಷಣ ಸಮಿತಿ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಹಾಗೂ ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜೈವಿಕ ಇಂಧನ ಉತ್ಪಾದನೆ ಮಾಡುವಂತೆ ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಅರಿವು ಮೂಡಿಸಬೇಕು. ಇಂಧನ ಉತ್ಪಾದನೆಗೆ ಪೂರಕವಾದ ಮರಗಳ ಬೀಜಗಳು ವ್ಯರ್ಥವಾಗುತ್ತಿದೆ. ಗ್ರಾಮೀಣ ಪ್ರದೇಶದ ಅಧಿಕಾರಿಗಳು ಬೀಜಗಳನ್ನು ಸಂಗ್ರಹಿಸಿ ಇಂಧನವಾಗಿ ಪರಿವರ್ತಿಸಬಲ್ಲ ಕಾರ್ಯವಿಧಾನವನ್ನು ಹಳ್ಳಿಗರಿಗೆ ಕಲಿಸಿ ಕೊಡಬೇಕು ಎಂದು ಸಲಹೆ ನೀಡಿದರು.
ಇಂಧನ ಉತ್ಪಾದನೆ ಅರಿವು ಮೂಡಿಸಿದರೆ ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯೋಗಕ್ಕೆ ದಾರಿಯಾಗಲಿದೆ. ಹೊಲ, ಗದ್ದೆಗಳ ಬದುಗಳಲ್ಲಿ ಜೈವಿಕ ಇಂಧನದ ಪೂರಕ ಗಿಡಗಳನ್ನು ನೆಟ್ಟು ಪೋಷಿಸುವಂತೆ ಪ್ರೇರಣೆ ನೀಡುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಮಾತನಾಡಿ, ಆಧುನಿಕ ಬದುಕಿನಲ್ಲಿ ಪರಿಸರ ಸ್ನೇಹಿ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಈ ಮೂಲಕ ಪರಿಸರದ ಅಮೂಲ್ಯ ಅಂಶಗಳು ಕಣ್ಮರೆ ಆಗುವ ಆತಂಕ ಒಂದಷ್ಟು ಕಾಲ ದೂರವಾಗುತ್ತದೆ. ಈ ವರ್ಷ ಕಾಲೇಜಿನಲ್ಲಿ ನಾಲ್ಕು ಪರಿಸರ ಸ್ನೇಹಿ ಧ್ಯೇಯ ಹೊಂದಲಾಗಿದೆ. ಕಾಗದ ರಹಿತ ಕಡತಗಳ ನಿರ್ವಹಣೆ, ಆನ್‌ಲೈನ್ ಬ್ಯಾಂಕಿಂಗ್, ಕಾಲೇಜಿಗೆ ಬೇಕಾಗುವಷ್ಟು ಸ್ವಯಂ ವಿದ್ಯುತ್ ಉತ್ಪಾದನೆ, ಮಳೆ ನೀರು ಸಂಗ್ರಹಣೆ ಮೂಲಕ ವರ್ಷಪೂರ್ತಿ ಬಳಸುವ ಉದ್ದೇಶಗಳು ಕೆಲವೇ ತಿಂಗಳಲ್ಲಿ ಸಾಕಾರಗೊಳ್ಳಲಿದೆ ಎಂದು ಹೇಳಿದರು.
ಕಾಲೇಜಿನ ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರದ ಸಹ ಸಂಚಾಲಕ ಡಾ. ಬಿ.ಎನ್.ರವಿಕುಮಾರ್, ಎಸ್‌ಟಿಪಿ ವಿಭಾಗದ ಯೋಜನಾ ಸಹಾಯಕಿ ರಶ್ಮಿ ಇತರರಿದ್ದರು. ಪಿಡಿಒಗಳು, ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೈವಿಕ ಇಂಧನ ತಯಾರಿಕೆ ಪ್ರಾತ್ಯಕ್ಷಿಕೆ ನಡೆಯಿತು.

ಖ್ಯಾತ ವಿಜ್ಞಾನಿ ರುಡಾಲ್ಫ್ ಡೀಸೆಲ್ ಅವರು ಡೀಸೆಲ್ ಎಂಜಿನ್ ಕಂಡುಹಿಡಿದು ಶೇಂಗಾ ಎಣ್ಣೆಯನ್ನು ಬಳಸಿ ಚಾಲು ಮಾಡಿದ ದಿನವನ್ನು ಜೈವಿಕ ಇಂಧನ ದಿನವಾಗಿ ಆಚರಿಸಲಾಗುತ್ತಿದೆ. 2040ರ ವೇಳೆಗೆ ಫಾಸಿಲ್ ಫ್ಯೂಯಲ್ ನಶಿಸಿ ಹೋಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭವನ್ನು ಸಮರ್ಥವಾಗಿ ಎದುರಿಸುವಲ್ಲಿ ನವೀಕರಿಸಬಹುದಾದ ಶಕ್ತಿ ಮೂಲಗಳು ಅತಿ ಪ್ರಮುಖ ಸ್ಥಾನ ಪಡೆದಿದೆ.- ಡಾ. ಎಸ್.ಜಿ.ಚೇತನ್ಜೈವಿಕ ಇಂಧನ ಸಂಶೋಧನೆ ಮಾಹಿತಿ, ಪ್ರಾತ್ಯಕ್ಷಿಕೆ ಕೇಂದ್ರದ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net