

ಶಿವಮೊಗ್ಗ:ಪರಿಸರದಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ಎಲ್ಲ ಜೀವಿಗಳೂ ತಮ್ಮದೇ ಆದ ಪಾತ್ರ ನಿರ್ವಹಿಸುತ್ತವೆ. ಆದ್ದರಿಂದ ಎಲ್ಲ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಪರಿಸರ ಹೇಳಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದಿಂದ ಗುರುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಜೀವ ವೈವಿಧ್ಯಕ್ಕೆ ವ್ಯಾಪಕ ಹಾನಿಯಾಗುತ್ತಿದೆ. ಅಭಿವೃದ್ಧಿ ಹಾಗೂ ಮಾನವನ ಬದುಕಿನ ಶೈಲಿ ಬದಲಾಗಿರುವುದೇ ಇದಕ್ಕೆ ಕಾರಣ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ.ಯೋಗೇಂದ್ರ ಮಾತನಾಡಿ, ನಮ್ಮ ಸುತ್ತಮುತ್ತ ಅಪಾರ ಜೀವ ವೈವಿಧ್ಯವಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಂಶೋಧಕರಿಗೆ ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಶೇಖರ್ ಗೌಳೇರ್ ಮಾತನಾಡಿ, ಸರ್ಕಾರ ಯಾವುದೇ ಯೋಜನೆ ರೂಪಿಸುವ ಮುನ್ನ ಹಲವು ಬಾರಿ ಯೋಚಿಸಬೇಕು. ಸಾರ್ವಜನಿಕರೊಂದಿಗೆ ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಪಶ್ಚಿಮ ಘಟ್ಟದಲ್ಲಿ ಇರುವ ಅಪರೂಪದ ಜೀವ ವೈವಿಧ್ಯವನ್ನು ನಾವೆಲ್ಲರೂ ಸೇರಿ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ವನ್ಯಜೀವಿಗಳಿಗೆ ಸಂಬಂಧಿಸಿದ ಡಾ. ಪರಮೇಶ್ವರ್, ಡಾ. ಶ್ರೀಕಾಂತ್ ಹೆಗಡೆ, ಡಾ. ಶೇಖರ್ ಗೌಳೇರ್ ತೆಗೆದ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು, ಸಂಶೋಧನಾ ವಿದ್ಯಾರ್ಥಿಗಳಾದ ಶ್ರೀಕಾಂತ್ ಜೇನಿನ ವೈವಿಧ್ಯ ಹಾಗೂ ಜಯಂತ್ ಬಾಬು ಹಾವುಗಳ ವೈವಿಧ್ಯ ಮತ್ತು ಪರಿಸರದಲ್ಲಿ ಅವುಗಳ ಮಹತ್ವ ಕುರಿತು ವಿವರಿಸಿದರು.
ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯೆ ಡಾ. ರಾಜೇಶ್ವರಿ, ಪ್ರಾಧ್ಯಾಪಕರಾದ ಡಾ. ಕೆ.ಪಿ.ಲತಾ, ಡಾ. ಪುರುಷೋತ್ತಮ್, ಎಸ್.ಪ್ರೇಮಾ, ಎಸ್.ಶ್ರೀಧರ್ ಇತರರಿದ್ದರು.