

Congress: ಕ್ರಿಮಿನಲ್ ಆರೋಪಗಳ ಮೇಲೆ ಸತತ 30 ದಿನಗಳವರೆಗೆ ಜೈಲಿನಲ್ಲಿದ್ದರೆ ಸಿಎಂ, ಪಿಎಂ, ಸಚಿವರನ್ನು ಅವರ ಹುದ್ದೆಯಿಂದ ತೆಗೆದು ಹಾಕುವಂತಹ ಮಸೂದೆ ಸೇರಿ ಒಟ್ಟು ಮೂರು ಮಸೂದೆಗಳ ಪರಿಶೀಲಿಸಲಿರುವ ಸಂಸತ್ತಿನ ಜಂಟಿ ಸದನ ಸಮಿತಿಯಲ್ಲಿ ನಾವು ಭಾಗವಹಿಸಲ್ಲ, ಬಹಿಷ್ಕರಿಸುತ್ತೇವೆ ಎಂದು ಕಾಂಗ್ರೆಸ್ ತಿಳಿಸಿದೆ ಎಂದು ಮಂಗಳವಾರ(ಅ. 14) ವರದಿಯಾಗಿದೆ.
ಮಳೆಗಾಲದ ಅಧಿವೇಶನದ ಕೊನೆಯ ದಿನದಂದು ಗೃಹ ಸಚಿವ ಅಮಿತ್ ಶಾ, ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದ್ದರು. ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ತಿದ್ದುಪಡಿ ಮಸೂದೆ, ಸಂವಿಧಾನದ ನೂರ ಮೂವತ್ತನೇ ತಿದ್ದುಪಡಿ ಮಸೂದೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ ತಿದ್ದುಪಡಿ ಮಸೂದೆ.
ಸಂವಿಧಾನದ 130ನೇ ತಿದ್ದುಪಡಿ ಮಸೂದೆ ಗಂಭೀರ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಜೈಲಿನಲ್ಲಿರುವ ಪ್ರಧಾನಿ, ಸಿಎಂ ಹಾಗೂ ಸಚಿವರನ್ನು ವಜಾಗೊಳಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಜೊತೆಗೆ ಉಳಿದ ಎರಡೂ ಮಸೂದೆಗಳನ್ನು ಸಹ ವಿಪಕ್ಷಗಳು ಅಧಿವೇಶನದಲ್ಲಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದವು.
ಈ ಮೂರು ಮಸೂದೆಗಳು ಸಂವಿಧಾನಬಾಹಿರವಾಗಿದ್ದು, ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಗುರಿಯಾಗಿಸುವ ಗುರಿಯನ್ನು ಹೊಂದಿವೆ ಎಂದು ಆರೋಪಿಸಿದ್ದವು. ಸಂಸತ್ ಸದನವು ಮಸೂದೆಗಳನ್ನು ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಿದೆ. ಇದರಲ್ಲಿ ಲೋಕಸಭೆಯಿಂದ 21 ಸದಸ್ಯರು ಮತ್ತು ರಾಜ್ಯಸಭೆಯಿಂದ 10 ಸದಸ್ಯರು ಇರುತ್ತಾರೆ. ಸಮಿತಿಯನ್ನು ಇನ್ನೂ ರಚಿಸಲಾಗಿಲ್ಲ.
ಈಗಾಗಲೇ ತೃಣಮೂಲ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಹಾಗೂ ಆಮ್ ಆದ್ಮಿ ಪಕ್ಷ ಈ ಸಮಿತಿಯ ಭಾಗವಾಗುವುದಿಲ್ಲ ಎಂದು ಘೋಷಿಸಿದ್ದವು. ಈ ಹಿನ್ನೆಲೆ ವಿರೋಧ ಪಕ್ಷಗಳು ಸರ್ವಾನುಮತದಿಂದ ಸಮಿತಿಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರಿಂದ ಕಾಂಗ್ರೆಸ್ ಸಹ ಜೆಪಿಸಿ ಸಮಿತಿಯಲ್ಲಿ ಭಾಗವಹಿಸಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಅವರಿಗೆ ತಿಳಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ. (ಏಜೆನ್ಸೀಸ್)