

ಸರಗೂರು : ತಾಲೂಕಿನ ಮೊಳೆಯೂರು ಗ್ರಾಮದಲ್ಲಿ ಭಾನುವಾರ ಶ್ರೀ ಬಿಲ್ ಕುಮಾರಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ, ಅಸ್ತಮ್ಮ ಕೊಂಡೋತ್ಸವ ಹಾಗೂ ಗ್ರಾಮ ದೇವತೆ ಮಾರಮ್ಮನಿಗೆ ವಿಶೇಷ ಪೂಜೆ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಬಳಿದು, ತೋರಣ ಕಟ್ಟಿ ಚಪ್ಪರ ಹಾಕಲಾಗಿತ್ತು. ದೇಗುಲಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವರ ವಿಗ್ರಹವನ್ನು ಗಂಗೆಸ್ನಾನ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಈ ನಡುವೆ ಭಕ್ತರಿಂದ ವಿವಿಧ ಸೇವಾ ಕಾರ್ಯಗಳು ಜರುಗಿತು. ವಾದ್ಯಗೋಷ್ಠಿಗಳು ಮೊಳಗಿದವು.
ಗಂಗೆ ತಾಣದಿಂದ ದೇವರ ವಿಗ್ರಹವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸತ್ತಿಗೆ ಸೂರಪಾನಿ ಸೇರಿದಂತೆ ಇನ್ನಿತರ ಕಲಾ ಪ್ರಕಾರಗಳು ಭಾಗಿಯಾಗಿದ್ದವು. ನಂತರ ವಿಗ್ರಹ ಮೂರ್ತಿಯನ್ನು ದೇವಸ್ಥಾನದ ಬಳಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ದಾರಿಯುದ್ದಕ್ಕೂ ಭಕ್ತರಿಂದ ವಿವಿಧ ಭಜನಾ ಕಾರ್ಯಕ್ರಮ ನಡೆದವು. ನಂತರ ದೇವಸ್ಥಾನದಲ್ಲಿ ದೇವತೆಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮಾಡಲಾಯಿತು.
ನಂತರ ಗ್ರಾಮದ ಅಸ್ತಮ್ಮ ದೇವಸ್ಥಾನದ ಮುಂಭಾಗ ಕೊಂಡೋತ್ಸವ ನಡೆಯಿತು. ಕೊಂಡೋತ್ಸವ ಕಣ್ತುಂಬಿಕೊಟ್ಟ ಸಾವಿರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು. ವಿವಿಧ ರೀತಿಯಲ್ಲಿ ಭಕ್ತರು ಹರಕೆ ತಿರಿಸಿದರು. ನಂತರ ಬಿಲ್ ಕುಮಾರಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥವನ್ನು ಮೆರವಣಿಗೆ ನಡೆಸಲಾಯಿತು.
ಕಾಂಗ್ರೆಸ್ ಮುಖಂಡ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಂತೋಷ್ ಕುಮಾರ್ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಜಾತ್ರೆಯಲ್ಲಿ ಗುಡಿ ಗೌಡರಾದ ಎಂ.ಸಿ.ಬೀರೇಗೌಡ, ಕರೀಗೌಡ, ಸಿದ್ದರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಕೆ.ಹರಿದಾಸ್, ತಾಲೂಕು ಕುರುಬ ಸಮಾಜ ಮಾಜಿ ಅಧ್ಯಕ್ಷ ಎಂ.ಬಿ.ಆನಂದ್, ಮುಖಂಡರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಂತೋಷ್, ಜವರಾಜು, ಎಂ.ಕೆ.ಜವನಪ್ಪ, ಶಿವಮೂರ್ತಿ, ಅಪ್ಪಾಜಿಗೌಡ, ಬೀರೇಗೌಡ, ರಾಜಪ್ಪ, ಮಹೇಶ್, ಗಣೇಶ್, ಸ್ವಾಮಿ, ಕುಮಾರ್, ರವಿ, ಮಹದೇವ್, ಯುವರಾಜ್, ನಾಗಣ್ಣ, ವೆಂಕಟೇಶ್, ನಾಗಯ್ಯ, ನಾಗರಾಜು, ನಾಗೇಂದ್ರ ಸೇರಿದಂತೆ ಮೊಳೆಯೂರು ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.