

ಕೋಲಾರ: ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಒಬ್ಬ ಸರ್ಕಾರದ ಅಂಗನವಾಡಿ ಕಟ್ಟಡವನ್ನೇ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಜಾಗವನ್ನು ಕಬಳಿಕೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಕಪ್ಪಲಮಡಗು ಗ್ರಾಮದಲ್ಲಿ ನಡೆದಿದೆ.
ಕಪ್ಪಲಮಡಗು ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುವ ಬಿಲ್ ಕಲೆಕ್ಟರ್ ಪ್ರಭಾಕರ್ ಎಂಬಾತ ಸರ್ಕಾರದ ಅಂಗನವಾಡಿ ಕಟ್ಟಡ ಹಾಗೂ ಆ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಸುಮಾರು 40ಕ್ಕೂ ಹೆಚ್ಚು ಸರ್ಕಾರದ ಜಾಗಗಳನ್ನು ತನ್ನ ಹಾಗೂ ತನ್ನ ಕುಟುಂಬಸ್ಥರ ಹೆಸರಿಗೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸರ್ಕಾರಿ ಜಾಗಗಳನ್ನು ಕಬಳಿಕೆ ಮಾಡಿದ್ದಾನೆ. ಅತನನ್ನು ಕೆಲಸದಿಂದ ವಜಾ ಮಾಡಬೇಕು, ಕಬಳಿಕೆ ಮಾಡಿರುವ ಸರ್ಕಾರಿ ಜಾಗಗಳನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿ ವಡ್ಡಹಳ್ಳಿಯ ನೂರಾರು ಗ್ರಾಮಸ್ಥರು ವಡ್ಡಹಳ್ಳಿ ಗ್ರಾಮದಿಂದ ಮುಳಬಾಗಿಲು ತಾಲ್ಲೂಕು ಕಚೇರಿವರೆಗೆ ಕಾಲ್ನಡಿಗೆ ಜಾಥಾ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ.