

ಛತ್ತೀಸಗಢ: ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರ ಇನ್‌ಸ್ಟಾಗ್ರಾಮ್ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈ ರೀಲ್ಸ್ ಮಾಡಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತರೊಂದಿಗೆ ರೀಲ್ಸ್ ಮಾಡಲು ಹೋಗಿ ಮೃತಪಟ್ಟಿರುವ ಘಟನೆ ಛತ್ತೀಸಗಢದ ಬಿಲಾಸಪುರ ಪಟ್ಟಣದಲ್ಲಿ ನಡೆದಿದೆ.
ಅಶುತೋಷ್ ಸಾವೊ (20) ಮೃತ ವಿದ್ಯಾರ್ಥಿ. ಬಿಲಾಸಪುರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್‌ಸಿ ಮೊದಲನೇ ವರ್ಷ ಓದುತ್ತಿದ್ದ. ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.
ಈತ ರೀಲ್ಸ್ ಮಾಡಲು ಐವರು ಸ್ನೇಹಿತರೊಂದಿಗೆ ಶುಕ್ರವಾರ ಮಧ್ಯಾಹ್ನ ಕಾಲೇಜಿನ ಟೆರೇಸ್‌ಗೆ ತೆರಳಿದ್ದಾನೆ. ಟೆರೇಸ್ ಗೋಡೆ ಮೇಲೆ ನಿಂತು, ಕಿಟಕಿಯ ಕಂಬಿ ಮೇಲೆ ಹಾರಿದ್ದಾನೆ. ಈ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ.20 ಅಡಿ ಎತ್ತರದಿಂದ ಬಿದ್ದ ಕಾರಣ ತಲೆಗೆ ತೀವ್ರ ಗಾಯಗಳಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬಿಲಾಸ್‌ಪುರ ಪಟ್ಟಣದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದ ಈ ಘಟನೆಯನ್ನು ಮೃತನ ಸ್ನೇಹಿತರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.