

ಚಿಕ್ಕಮಗಳೂರು: ಮಠ-ಮಂದಿರ, ಮಸೀದಿ ಹಾಗೂ ಚರ್ಚ್‌ಗಳನ್ನು ನಿರ್ಮಿಸುವ ಮೊದಲು ಪ್ರಕೃತಿಗೆ ಪೂರಕವಾಗಿರುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಬಿಕ್ಕೆಮನೆ ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಸುಂದರಗೌಡ ಹೇಳಿದರು. ಎಸ್‌ಟಿಜೆ ಮಹಿಳಾ ಕಾಲೇಜು ಆವರಣದಲ್ಲಿ ಶ್ರೀಗಂಧ ಸಸಿ ನೆಟ್ಟು ಮಾತನಾಡಿ, ಮಾನವೀಯತೆಯೇ ವಿಶ್ವಧರ್ಮವಾಗಬೇಕು. ವಿಶ್ವವೇ ದೇಗುಲವಾಗಬೇಕು. ಮರ, ಗಿಡಗಳಲ್ಲಿ ಭಗವಂತನನ್ನು ಕಾಣಬೇಕು. ಮನುಷ್ಯನೇ ಪೂಜಾರಿಯಾಗಿ ಪ್ರಕೃತಿ ಕಾಪಾಡುವುದೇ ದೇವರೆಂದು ಪರಿಗಣಿಸಿ ನಿರಂತರವಾಗಿ ಪರಿಸರ ಉಳಿಸಲು ಶ್ರಮವಹಿಸಿದರೆ ಜೀವಿಸಲು ಭೂಮಿ ಯೋಗ್ಯವಾಗಲಿದೆ ಎಂದು ತಿಳಿಸಿದರು. ಪ್ರೊ. ಜೆ.ಕೆ.ಭಾರತಿ ಮಾತನಾಡಿ, ಪರಿಸರದ ವಿರುದ್ಧ ಮಾನವರು ಸಾಗಿದರೆ ಭೂಮಿ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಎಚ್ಚರಿಕೆಯಿಂದ ಪ್ರಕೃತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದರು. ಪ್ರಕಾಶ್ ಇತರರಿದ್ದರು.