

ಬೆಂಗಳೂರು : ಕಾರು ಚಾಲಕ ಯೂ ಟರ್ನ್ ಪಡೆಯುವ ಸಂದರ್ಭದಲ್ಲಿ ತನ್ನನ್ನ ಗಮನಿಸಲಿಲ್ಲವೆಂದು ಸಿಟ್ಟಿಗೆದ್ದ ಬೈಕ್ ಸವಾರನೊಬ್ಬ ಕಾರನ್ನು ಅಡ್ಡಗಟ್ಟಿ ಕಾಲಿನಿಂದ ಒದ್ದು ಉದ್ಧಟತನ ಪ್ರದರ್ಶಿಸಿದ್ದಾನೆ.
ಜೂನ್ ೭ರಂದು ೧೧.೩೦ ರ ಸುಮಾರಿಗೆ ಜಕ್ಕೂರು ಬಳಿಕ ಶ್ರೀರಾಮಪುರ ವಿಲೇಜ್ ಬಳಿ ಈ ಘಟನೆ ನಡೆದಿದ್ದು, ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಬೈಕ್ ಸವಾರ ಉದ್ಧಟತನ ತೊರಿರುವ ದೃಶ್ಯ ಸೆರೆಯಾಗಿದೆ. ಕಾರಿನಲ್ಲಿ ಸಾಗುತ್ತಿದ್ದ ಚಾಲಕ ಪ್ರವೀಣ್, ಯೂ ಟರ್ನ್ ಪಡೆಯುವಾಗ ಬೈಕ್ ಸವಾರನನ್ನು ಗಮನಿಸಿರಲಿಲ್ಲ. ಕೊಂಚ ದೂರು ಸಾಗಿದ ಬಳಿಕ ಕಾರನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿದ್ದ ಬೈಕ್ ಸವಾರ ಇಳಿದು ಬಂದು ಏಕಾಏಕಿ ಕಾರಿನ ಬಾನೆಟ್‌ಗೆ ಕಾಲಿನಿಂದ ಒದ್ದು, ಕಾರು ಚಾಲಕನಿಗೆ ನಿಂದಿಸಿದ್ದಾನೆ. ಆರೋಪಿಯ ಕೃತ್ಯ ಕಾರಿನಲ್ಲಿ ಅಳವಡಿಸಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ಕುರಿತು ಕಾರು ಚಾಲಕ ಪ್ರವೀಣ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸರು ಆತನನ್ನು ಸಂಪರ್ಕಿಸಿ ಬೈಕ್ ಚಾಲಕನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.