ಎಚ್.ಡಿ.ಕೋಟೆ : ಮೈಸೂರು-ಮಾನಂದವಾಡಿ ರಸ್ತೆಯ ಪಾಳ್ಯ ಗೇಟ್ ಬಳಿ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ. ತಾಲೂಕಿನ ಕರಿಗಳ ಗ್ರಾಮದ ನಿವಾಸಿ ವೆಂಕಟೇಶ್(36) ಮೃತರು.
ಇವರು ಭಾನುವಾರ ಹೊಮ್ಮರಗಳ್ಳಿ ಗ್ರಾಮದಿಂದ ಕರಿಗಳ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಎಚ್.ಡಿ.ಕೋಟೆ ಕಡೆಯಿಂದ ಮೈಸೂರು ಕಡೆಗೆ ಬರುತ್ತಿದ್ದ ಓಮ್ನಿ ಕಾರು ಪಾಳ್ಯ ಸೇತುವೆ ಸಮೀಪ ವೆಂಕಟೇಶ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ತಲೆಗೆ ಪೆಟ್ಟು ಬಿದ್ದ ವೆಂಕಟೇಶ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಿ ಮೃತಪಟ್ಟಿದ್ದರು. ವ್ಯಾನ್‌ನಲ್ಲಿದ್ದ ಎಲ್ಲರೂ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮೈಸೂರಿನ ಕೆ. ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ನೀಡಲಾಯಿತು. ಸೋಮವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಸಂಬಂಧ ಎಚ್.ಡಿ.ಕೋಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.