ಸಿಬಿಐಗೆ ಮಹಾಮೈತ್ರಿ ಸೆಡ್ಡು!

cvbsdfgdfg
Published on

ಪಟನಾ: ಎನ್​ಡಿಎ ಸಖ್ಯ ಬಿಟ್ಟ ಜೆಡಿಯು, ಮಹಾಘಟಬಂಧನ್ ಜತೆ ಸೇರಿದ ನಂತರ ರಾಜ್ಯದಲ್ಲಿ ತನಿಖೆ ಕೈಗೊಳ್ಳಲು ಸಿಬಿಐಗೆ ಅಗತ್ಯವಾದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಲು ಮುಂದಾಗಿದೆ. ಈ ಕುರಿತ ಕಾನೂನು ಪ್ರಕ್ರಿಯೆಯನ್ನು ಸಿಎಂ ನಿತೀಶ್ ಕುಮಾರ್ ಆರಂಭಿಸಿದ್ದಾರೆ ಎಂದು ಆರ್​ಜೆಡಿ ನಾಯಕರೊಬ್ಬರು ತಿಳಿಸಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಯನ್ನು ಬಿಜೆಪಿ ರಾಜಕೀಯ ಉದ್ದೇಶಗಳಿಗೆ ಬಳಕೆ ಮಾಡುತ್ತಿದೆ ಎಂದು ಎನ್​ಡಿಎಯೇತರ ಪಕ್ಷಗಳು ಆರೋಪಿಸಿವೆ. ಈಗಾಗಲೇ 9 ರಾಜ್ಯಗಳಲ್ಲಿ ಸಿಬಿಐಗೆ ಸಾಮಾನ್ಯ ಒಪ್ಪಿಗೆಯನ್ನು ಈಗಾಗಲೇ ಹಿಂಪಡೆಯಲಾಗಿದೆ. ನಿತೀಶ್ ಕುಮಾರ್ ಸಚಿವ ಸಂಪುಟ ವಿಸ್ತರಣೆ ಮಾಡಿದ ದಿನವೇ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿ ಆರ್​ಜೆಡಿಯ ಹಲವು ನಾಯಕರಿಗೆ ಸೇರಿದ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಲಾಲು ಪ್ರಸಾದ್ ಯಾದವ್ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ ನಡೆದ ಭೂಮಿ ನೀಡಿ ಉದ್ಯೋಗ ಗಿಟ್ಟಿಸಿಕೊಂಡ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಹೀಗಾಗಿ ಮುಂದೆ ಇಂಥ ದಾಳಿಗಳಿಗೆ ಆಸ್ಪದ ಆಗಬಾರದು ಎಂದು ಆರ್​ಜೆಡಿ ಬಯಸಿದೆ. ಆದಕಾರಣ ಈಗಾಗಲೇ 9 ರಾಜ್ಯಗಳು ರದ್ದು ಮಾಡಿರುವ ಸಿಬಿಐಗೆ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಲು ಮಿತ್ರಪಕ್ಷ ಜೆಡಿಯುವನ್ನು ಪುಸಲಾಯಿಸಿದೆ.

ಸಾಮಾನ್ಯ ಒಪ್ಪಿಗೆ ಏಕೆ ಅಗತ್ಯ?

ಯಾವುದೇ ರಾಜ್ಯದಲ್ಲಿ ಸಿಬಿಐ ತನಿಖೆ ನಡೆಸಬೇಕಿದ್ದರೆ 1946ರ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್​ಪಿಇ) ಕಾಯ್ದೆಯ ಸೆಕ್ಷನ್ 6ರ ಅನ್ವಯ ಅದಕ್ಕೆ ಅಲ್ಲಿನ ಸರ್ಕಾರದ ಅನುಮತಿ ಪಡೆಯಬೇಕು. ಸರ್ವೆಸಾಮಾನ್ಯವಾಗಿ ಇಂಥ ಅನುಮತಿಯನ್ನು ಎಲ್ಲ ರಾಜ್ಯಗಳು ನೀಡಿರುತ್ತವೆ. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ತನ್ನ ರಾಜಕೀಯ ಹಗೆತನ ತೀರಿಸಿಕೊಳ್ಳಲು ಬಳಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಈ ಕಾರಣದಿಂದ ಕೇಂದ್ರ ಸರ್ಕಾರದ ವಿರುದ್ಧ ಸೆಡ್ಡು ಹೊಡೆಯಲು ಸಿಬಿಐಗೆ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯುತ್ತಿವೆ. ಡಿಎಸ್​ಪಿಇ ಕಾಯ್ದೆಯ ಸೆಕ್ಷನ್ 6 ವ್ಯಾಪ್ತಿ ಮೀರಿದ ಸ್ಥಳದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯ ಅಧಿಕಾರ ವಿಸ್ತರಣೆಯನ್ನು ವಿವೇಚಿಸುತ್ತದೆ. ಕೇಂದ್ರಾಡಳಿತ ಪ್ರದೇಶ ಮತ್ತು ರೈಲ್ವೆ ಸರಹದ್ದನ್ನು ಬಿಟ್ಟು ರಾಜ್ಯಗಳ ಇನ್ಯಾವುದೇ ಭಾಗದಲ್ಲಿ ಸಿಬಿಐ ತನಿಖೆ ನಡೆಸಬೇಕಿದ್ದರೆ ಸಂಬಂಧಿತ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಲಾಗಿದೆ. ಆದರೆ, ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್​ಗಳಿಂದ ತನಿಖೆಗೆ ಆದೇಶವಾಗಿದ್ದರೆ ಅಂಥ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯುವ ಅಗತ್ಯ ಇರುವುದಿಲ್ಲ.

ಪರಿಣಾಮ ಬೀರದು ಎಂದ ಸಿಬಿಐ

ಬಿಹಾರ ಸರ್ಕಾರ ಸಾಮಾನ್ಯ ಒಪ್ಪಿಗೆ ಹಿಂಪಡೆದರೂ ಅದು ರೈಲ್ವೆ ನೇಮಕಾತಿಯ ಭೂಮಿ ಹಗರಣದ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂ ದರೆ ಈ ಪ್ರಕರಣ ದೆಹಲಿ ಯಲ್ಲಿ ದಾಖಲಾಗಿದೆ. ಜತೆಗೆ ರಾಜ್ಯ ಸರ್ಕಾರದ ನಿರ್ಧಾರವು ಪೂರ್ವಾನ್ವಯವಾಗುವುದಿಲ್ಲ ಎಂದು ಸಿಬಿಐ ಸ್ಪಷ್ಟ ಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net