

Bihar Murders : ಬಿಹಾರದಾದ್ಯಂತ ನಡೆಯುತ್ತಿರುವ ಗುಂಡಿನ ದಾಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ಪ್ರಮುಖ ಉದ್ಯಮಿ, ಪಶುವೈದ್ಯ ಸೇರಿದಂತೆ ಮೂವರು ಸಾವಿಗೀಡಾಗಿದ್ದು, ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಶನಿವಾರ (ಜುಲೈ12) ನಡೆದ ಘಟನೆಯಲ್ಲಿ, ಬಿಹಾರದ ಸೀತಾಮರ್ಹಿ ಜಿಲ್ಲೆಯ ಅತ್ಯಂತ ಜನನಿಬಿಡ ಮಾರುಕಟ್ಟೆ ಪ್ರದೇಶವಾದ ಮೆಹ್ಸೌಲ್ ಚೌಕ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಉದ್ಯಮಿ ಪುಟು ಖಾನ್ ಅವರ ತಲೆಗೆ ಗುಂಡು ಹಾರಿಸಿದ್ದು, ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಖಾನ್ ಅವರನ್ನು ಹಾಡಹಗಲೇ ಗುರಿಯಾಗಿಸಿಕೊಂಡು ಕೃತ್ಯ ಎಸಗಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖಾನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ದಾಳಿಕೋರರನ್ನು ಗುರುತಿಸಲು ಹತ್ತಿರದ ಅಂಗಡಿಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಘಟನಾ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದ ಕುಟುಂಬ ಸದಸ್ಯರು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿದರು. ಅಷ್ಟೆ ಅಲ್ಲದೆ ಖಾನ್ ಅವರ ವ್ಯವಹಾರಕ್ಕೆ ಸಂಬಂಧಿಸಿದ ಭೂ ವಿವಾದವೇ ಈ ಕೊಲೆಗೆ ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿ ಶವದೊಂದಿಗೆ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳೀಯ ಜನರ ಆಕ್ರೋಶ ಹೆಚ್ಚಾದ ಕಾರಣ, ಮಾಧ್ಯಮ ಸಿಬ್ಬಂದಿಯನ್ನು ದೃಶ್ಯ ಚಿತ್ರೀಕರಿಸದಂತೆ ತಡೆಯಲಾಯಿತು.
ಈ ಘಟನೆ ಸಂಭವಿಸಿದ ಕೆಲವೇ ಗಂಟೆಗಳ ನಂತರ, ಪಟನಾ ಜಿಲ್ಲೆಯ ಶೇಖ್‌ಪುರ ಗ್ರಾಮದಲ್ಲಿ ಪಶುವೈದ್ಯ ಸುರೇಂದ್ರ ಕುಮಾರ್ (50) ಮೇಲೆ ಗುಂಡು ಹಾರಿಸಲಾಯಿತು. ಕುಮಾರ್ ತಮ್ಮ ಹೊಲಕ್ಕೆ ನೀರುಣಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಬಂದೂಕುಧಾರಿಗಳು ಅವರ ಮೇಲೆ ಗುಂಡು ಹಾರಿಸಿದರು. ಗುಂಡೇಟಿನಿಂದ ಗಾಯಗೊಂಡಿದ್ದ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡ ಗ್ರಾಮಸ್ಥರು ಪಟನಾದ ಏಮ್ಸ್ ಆಸ್ಪತ್ರೆಗೆ ಕರೆದೊಯ್ದರು ಯಾವುದೇ ಪ್ರಯಜನವಾಲಿಲ್ಲ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಇಲ್ಲಿಯವರೆಗೆ ಯಾವುದೇ ಪ್ರತ್ಯಕ್ಷದರ್ಶಿಗಳು ಮುಂದೆ ಬಂದಿಲ್ಲ. ನಾವು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಸುರೇಂದ್ರ ಕುಮಾರ್ ಬಿಜೆಪಿಯ ಕಿಸಾನ್ ಮೋರ್ಚಾದ ಮಾಜಿ ಬ್ಲಾಕ್ ಅಧ್ಯಕ್ಷರಾಗಿ ಆ ಪ್ರದೇಶದಲ್ಲಿ ಪರಿಚಿತರಾಗಿದ್ದು, ರಾಜಕೀಯ ದ್ವೇಶಕ್ಕಾಗಿ ಈ ಕೊಲೆ ನಡೆದಿರಬಹುದೇ ಎನ್ನುವ ಅನುಮಾನವು ವ್ಯಕ್ತವಾಗಿದೆ.
ಶುಕ್ರವಾರ (ಜುಲೈ11) ಸಂಜೆ ರಾಮಕೃಷ್ಣ ನಗರ ಪ್ರದೇಶದಲ್ಲಿ ದಿನಸಿ ಅಂಗಡಿ ಮಾಲೀಕ ವಿಕ್ರಮ್ ಝಾ ಅವರನ್ನು ಅಪರಿಚಿತ ದುಷ್ಕರ್ಮಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು,ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ಒಂದರ ನಂತರ ಒಂದರಂತೆ ನಡೆದ ಕೊಲೆಗಳು ಭೀತಿ ಮತ್ತು ಟೀಕೆಗಳನ್ನು ಹುಟ್ಟುಹಾಕಿದೆ. ಜೆಡಿಯು-ಬಿಜೆಪಿ ಆಡಳಿತ ಮೈತ್ರಿಕೂಟವು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆವನ್ನು ಹದಗೆಡಿಸಿವೆ ಎಂದು ವಿಪಕ್ಷ ನಾಯಕರಿಂದ ತೀವ್ರ ಟೀಕೆಗಳು ಕೇಳಿಬರುತ್ತಿವೆ. ಬಿಹಾರಿಗಳು ಇನ್ನೂ ಎಷ್ಟು ಕೊಲೆಗಳನ್ನು ಎದುರಿಸಬೇಕಾಗಬಹುದು? ಬಿಹಾರ ಪೊಲೀಸರ ಜವಾಬ್ದಾರಿ ಏನು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಮಿತ್ರಪಕ್ಷದ ಚಿರಾಗ್ ಪಾಸ್ವಾನ್ ಶನಿವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ, ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮಾತನಾಡಿ ರಾಜ್ಯದಲ್ಲಿ ಯಾವುದೇ ಅಪರಾಧ ನಡೆದಿಲ್ಲ, ಉತ್ತಮ ಆಡಳಿತ ಮಾತ್ರ ಇದೆ ಎಂದು ಹೇಳಿಕೊಂಡರೆ, ಅವರ ಸಹೋದ್ಯೋಗಿ ವಿಜಯ್ ಕುಮಾರ್ ಸಿನ್ಹಾ ವಿರೋಧ ಪಕ್ಷದತ್ತ ಬೆರಳು ತೋರಿಸಿ ಆರ್‌ಜೆಡಿಯ ಜನರು ಚುನಾವಣೆ ಸಮೀಪಿಸುತ್ತಿದ್ದಂತೆ ಅವ್ಯವಸ್ಥೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. (ಏಜೆನ್ಸೀಸ್)