

Loan Recovery Agent : ಮದ್ಯವ್ಯಸನಿ ಪತಿಯ ಕಿರುಕುಳವನ್ನು ಸಹಿಸಲಾಗದೆ ಮಹಿಳೆಯೊಬ್ಬಳು ತನ್ನ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಲೋನ್ ರಿಕವರಿ ಏಜೆಂಟ್ನನ್ನೇ ಪ್ರೀತಿಸಿ ಮದುವೆಯಾಗಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.
ಇಂದ್ರ ಕುಮಾರಿ ಎಂಬಾಕೆ 2022 ರಲ್ಲಿ ಜಮುಯಿ ಜಿಲ್ಲೆಯ ನಿವಾಸಿ ನಕುಲ್ ಶರ್ಮ ಎಂಬಾತನನ್ನು ವಿವಾಹವಾದರು. ನಕುಲ್ ಮದ್ಯಪಾನಕ್ಕೆ ದಾಸನಾಗಿದ್ದ. ಅಲ್ಲದೆ, ಕುಡಿದ ಮತ್ತಿನಲ್ಲಿ ಆಗಾಗ ಪತ್ನಿಯನ್ನು ಥಳಿಸಿ, ಚಿತ್ರಹಿಂಸೆ ನೀಡುತ್ತಿದ್ದ. ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಸಹಿಸಲಾರದೆ ಆತನಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಇಂದ್ರ ಕುಮಾರಿ ಯೋಚನೆ ಮಾಡಿದಳು.
ಅದೇ ಸಮಯದಲ್ಲಿ ಆಕೆ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲೋನ್ ರಿಕವರಿ ಏಜೆಂಟ್ ಪವನ್ ಕುಮಾರ್ ಯಾದವ್ ಎಂಬಾತನನ್ನು ಭೇಟಿಯಾದಳು. ಸಾಲವನ್ನು ವಸೂಲಿ ಮಾಡಲು ಪವನ್ ಆಗಾಗ ನಕುಲ್ ಮನೆಗೆ ಹೋಗುತ್ತಿದ್ದ. ಇದು ಕ್ರಮೇಣ ಇಂದ್ರಕುಮಾರಿ ಮತ್ತು ಪವನ್ ನಡುವೆ ಸಂಬಂಧ ಬೆಳೆಸಿತು. ಅಲ್ಲದೆ, ಇಬ್ಬರ ನಡುವೆ ಪ್ರೀತಿಗೂ ಕಾರಣವಾಯಿತು. 5 ತಿಂಗಳ ಕಾಲ ಇಬ್ಬರೂ ರಹಸ್ಯವಾಗಿ ತಮ್ಮ ಸಂಬಂಧವನ್ನು ಮುಂದುವರೆಸಿದರು. ಇದರ ನಡುವೆ ಫೆಬ್ರವರಿ 4ರಂದು ಇಬ್ಬರೂ ಪಶ್ಚಿಮ ಬಂಗಾಳದ ಅಸನ್ಸೋಲ್ಗೆ ಪರಾರಿಯಾದರು.
ಇಬ್ಬರು ಜಮುಯಿಗೆ ಹಿಂದಿರುಗುವ ಮೊದಲು ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದರು. ಬಳಿಕ ಫೆಬ್ರವರಿ 11 ರಂದು ಅವರು ದೇವಸ್ಥಾನದಲ್ಲಿ ವಿವಾಹವಾದರು. ಇವರ ಮದುವೆಯಲ್ಲಿ ಸಾಕಷ್ಟು ಮಂದಿಯು ಸಹ ಪಾಲ್ಗೊಂಡಿದ್ದರು. ಇವರಿಬ್ಬರ ಮದುವೆಗೆ ಪವನ್ ಮನೆಯವರು ಒಪ್ಪಿಗೆ ಸೂಚಿಸಿದರೂ ಇಂದ್ರ ಕುಮಾರಿ ಮನೆಯವರು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪವನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನ್ನ ಸ್ವಂತ ಇಚ್ಛೆಯಿಂದಲೇ ಪವನ್ ನನ್ನು ಮದುವೆಯಾಗಿರುವುದಾಗಿ ಇಂದ್ರ ಕುಮಾರಿ ಪೊಲೀಸರಿಗೆ ತಿಳಿಸಿದ್ದಾರೆ. ನವ ದಂಪತಿಗೆ ಬೆದರಿಕೆಗಳು ಬರುತ್ತಿದ್ದು, ಅಧಿಕಾರಿಗಳಿಂದ ರಕ್ಷಣೆ ಕೋರಿದ್ದಾರೆ. (ಏಜೆನ್ಸೀಸ್)