

Prashant Kishor: ಮುಂದಿನ ತಿಂಗಳು ನ. 06 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಪಕ್ಷವನ್ನು ಬಲಪಡಿಸುತ್ತ ಗಮನಹರಿಸುತ್ತೇನೆ ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಬುಧವಾರ(ಅ. 15) ಹೇಳಿದ್ದಾರೆ.
ಪ್ರಶಾಂತ್ ಕಿಶೋರ್, ರಾಘೋಪುರ ವಿಧಾನಸಭಾ ಸ್ಥಾನದಿಂದ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಎದುರಿಸಲಿದ್ದಾರೆ ಎಂದು ಊಹಾಪೋಹಗಳು ಎದ್ದಿದ್ದವು. ಆದರೆ ಮಂಗಳವಾರ ರಾಘೋಪುರ್ ಕ್ಷೇತ್ರದಿಂದ ಚಂಚಲ್ ಸಿಂಗ್ ಅವರಿಗೆ ಜೆಎಸ್ಪಿಯಿಂದ ಟಿಕೆಟ್ ನೀಡಲಾಗಿದೆ.
ಈ ಕುರಿತು ಮಾತನಾಡಿರುವ, ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಪಕ್ಷ ನಿರ್ಧರಿಸಿದೆ. ಆದ್ದರಿಂದ, ಪಕ್ಷವು ರಾಘೋಪುರ್‌ನಿಂದ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ನಾನು ಚುನಾವಣಾ ಕಾರ್ಯತಂತ್ರ ಮತ್ತು ಪಕ್ಷದ ನೆಲೆಯನ್ನು ಬಲಪಡಿಸುವತ್ತ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಒಂದು ವೇಳೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ಗಮನವು ಸಂಘಟನೆಯ ಅಗತ್ಯ ಕೆಲಸದಿಂದ ಬೇರೆಡೆಗೆ ತಿರುಗುತ್ತಿತ್ತು. ಪಕ್ಷದ ಹಿತಾಸಕ್ತಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಪಕ್ಷವು ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತದೆ ಅಥವಾ ಹೀನಾಯ ಸೋಲನ್ನು ಅನುಭವಿಸುತ್ತದೆ. 10 ಕ್ಕಿಂತ ಕಡಿಮೆ ಅಥವಾ 150 ಕ್ಕಿಂತ ಹೆಚ್ಚು ಸ್ಥಾನಗಳು ಸಿಗುವ ನಿರೀಕ್ಷೆ ನನಗಿದೆ. ಎನ್ಡಿಎ ಹೀನಾಯವಾಗಿ ಸೋಲುತ್ತದೆ ಎಂದು ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ನಿರ್ಧಾರಕ್ಕೆ ಆರ್ಜೆಡಿ & ಜೆಡಿಯು ಟೀಕೆ
ಪ್ರಶಾಂತ್ ಕಿಶೋರ್ ಚುನಾವಣೆಗೆ ಸ್ಪರ್ಧಿಸದಿರುವ ನಿರ್ಧಾರವನ್ನು ಟೀಕಿರುವ ಆರ್ಜೆಡಿ ಮತ್ತು ಆರ್ಜೆಡಿ, ಯುದ್ದಭೂಮಿಗೆ ಹೋಗುವ ಮೊದಲೇ ಪ್ರಶಾಂತ್ ಕಿಶೋರ್ ಮತ್ತು ಅವರ ಪಕ್ಷ ಸೋಲನ್ನು ಒಪ್ಪಿಕೊಂಡಿದೆ. ಅವರು ಸೋಲುತ್ತೇವೆ ಎಂಬುದನ್ನು ಅರಿತುಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ ಎಂದು ಆರ್ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.
ಜೆಡಿಯು ವಕ್ತಾರ ನೀರಜ್ ಕುಮಾರ್ ಮಾತನಾಡಿ, ಪ್ರಶಾಂತ್ ಕಿಶೋರ್ ಅವರ ನಿರ್ಧಾರವು ಅವರ ಪಕ್ಷದ ಕಾರ್ಯಕರ್ತರಿಗೆ ಮಾಡಿದ ಅವಮಾನ. ಅವರು ಚುನಾವಣಾ ಯುದ್ಧಕ್ಕೂ ಮುನ್ನ ಓಡಿಹೋಗಿದ್ದಾರೆ. ಇದಕ್ಕೂ ಮೊದಲು, ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪಾದಯಾತ್ರೆಗಳನ್ನು ಕೈಗೊಂಡಿದ್ದಾಗಿ ಅವರು ಹೇಳಿಕೊಂಡಿದ್ದರು. ಅದಕ್ಕೆ ಏನಾಯಿತು? ಅವರ ನಿರ್ಧಾರವು ಅವರ ಕಾರ್ಯಕರ್ತರಿಗೆ ಮುಜುಗುರ ತಂದಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)