

ಪಾಟ್ನಾ: ಬಿಹಾರದ ಪರ್ವತ ಮಾನವ ಎಂದೇ ಪ್ರಸಿದ್ದಿ ಪಡೆದಿರುವ ದಶರಥ ಮಾಂಝಿ ಪುತ್ರ ಭಾಗೀರಥ ಮಾಂಝಿಯವರಿಗೆ ಕಾಂಗ್ರೆಸ್(Congress), ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಹೇಳಿ, ಕೊನೆಗಾಲದಲ್ಲಿ ನಿರಾಸೆ ಮೂಡಿಸಿದೆ ಎಂದು ಬುಧವಾರ(ಅ. 22) ಹೇಳಿದ್ದಾರೆ.
ಈ ಕುರಿತು ಎಎನ್ಐ ಜೊತೆ ಮಾತನಾಡಿರುವ ಭಾಗೀರಥ ಮಾಂಝಿ, ಚುನಾವಣೆ ಸ್ಫರ್ಧಿಸಲು ನಾನು ಸಿದ್ದನಾಗಿದದ್ದೆ. ನಾನು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೆ. ಕಳೆದ ಬಾರಿ ರಾಹುಲ್ ಗಾಂಧಿಯವರು ಇಲ್ಲಿಗೆ ಬಂದಾಗ ಟಿಕೆಟ್ ಕೇಳಿದ್ದೆ, ಅವರು ಟಿಕೆಟ್ ನೀಡುವುದಾಗಿ ಹೇಳಿದ್ದರು. ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ ಏನಾಯಿತು ಗೊತ್ತಿಲ್ಲ ನಮಗೆ ಟಿಕೆಟ್ ಸಿಗಲಿಲ್ಲ. ನಾನು ದೆಹಲಿಯಲ್ಲಿ 4 ದಿನ ತಂಗಿದ್ದೆ, ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಮೌಂಟೆನ್ ಮ್ಯಾನ್ ಎಂದೇ ಕರೆಸಿಕೊಂಡಿದ್ದ ದಶರಥ ಮಾಂಝಿ 22 ವರ್ಷಗಳ ಕಾಲ ಒಬ್ಬಂಟಿಯಾಗಿಯೇ 110 ಮೀಟರ್ ಉದ್ದ, 9.1 ಮೀಟರ್ ಅಗಲ, ಮತ್ತು 7.7 ಮೀಟರ್ ಆಳ ಮಾರ್ಗವನ್ನು ಸುತ್ತಿಗೆ ಮತ್ತು ಉಳಿ ಮಾತ್ರ ಬಳಸಿ ಕೆತ್ತಿದ್ದರು. ಇದರಿಂದ ಗಯಾ ಜಿಲ್ಲೆಯ ಅತ್ರಿ ಮತ್ತು ವಜೀರ್ಗಂಜ್ ಸಂಪರ್ಕದ ಅಂತರವನ್ನು 55 ಕಿ.ಮೀ.ಗಳಿಂದ 15 ಕಿ.ಮೀ.ಗೆ ಇಳಿಯಿತು.
2007 ಆಗಸ್ಟ್ 17ರಂದು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ನಲ್ಲಿ ದಶರಥ್ ಮಾಂಝಿ ನಿಧನರಾದರು. ಬಿಹಾರ ಸರ್ಕಾರವು ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಿತು. 2006ರಲ್ಲಿ ಸಾಮಾಜಿಕ ಸೇವಾ ವಿಭಾಗದ ಅಡಿಯಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಅವರ ಹೆಸರನ್ನು ಸೂಚಿಸಲಾಗಿತ್ತು. 2016ರಲ್ಲಿ ಇಂಡಿಯಾ ಪೋಸ್ಟ್ 'ಬಿಹಾರದ ವ್ಯಕ್ತಿತ್ವಗಳು' ಸರಣಿಯ ಅಡಿಯಲ್ಲಿ ಅವರ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
ಕೆಲ ತಿಂಗಳ ಹಿಂದೆ ರಾಹುಲ್ ಗಾಂಧಿ ದಶರಥ್ ಮಾಂಝಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಿದರು. ಮತ್ತು ಗುಡಿಸಲಿನಲ್ಲಿದ್ದ ಅವರ ಕುಟುಂಬಕ್ಕೆ ವೈಯಕ್ತಿಕ ಖರ್ಚಿನಲ್ಲಿ ಒಂದು ಮನೆಯನ್ನು ಕಟ್ಟಿಸಿಕೊಂಡಿದ್ದಾರೆ. (ಏಜೆನ್ಸೀಸ್)