Bihar Election| ನಾಳೆ ಮೊದಲ ಹಂತದ 18 ಜಿಲ್ಲೆಗಳ 121 ಕ್ಷೇತ್ರಗಳಲ್ಲಿ ಮತದಾನ; ತೇಜಸ್ವಿ ಯಾದವ್, ಡಿಸಿಎಂ ಚೌಧರಿ ಕಣದಲ್ಲಿ

ವಿಜಯವಾಣಿ - 2025-11-05T093558.917
Published on

ಪಾಟ್ನಾ: 2025ರ ಬಿಹಾರ ರಾಜ್ಯ ವಿಧಾನಸಭೆ ಚುನಾವಣೆಯ(Bihar Election) ಮೊದಲ ಹಂತದ ಪ್ರಚಾರ ಮಂಗಳವಾರ ಕೊನೆಗೊಂಡಿದ್ದು, ನಾಳೆ(ನ. 06) 18 ಜಿಲ್ಲೆಗಳ 121 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇಂಡಿಯಾ ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್, ಎನ್​ಡಿಎ ಆಡಳಿತ ಡಿಸಿಎಂಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸೇರಿ ಅನೇಕರು ಕಣದಲ್ಲಿದ್ದಾರೆ.

ಉಳಿದ 122 ಸ್ಥಾನಗಳಿಗೆ ನ. 11ರಂದು ಮತದಾನ ನಡೆಯಲಿದ್ದು, ನ. 14ರಂದು ಫಲಿತಾಂಶ ಪ್ರಕಟವಾಗಲಿದೆ. 243 ಕ್ಷೇತ್ರಗಳಲ್ಲಿ 203 ಸಾಮಾನ್ಯ ಸ್ಥಾನಗಳಾಗಿದ್ದು, 38 ಎಸ್‌ಸಿ ಮತ್ತು ಎರಡು ಎಸ್‌ಟಿಗಳಿಗೆ ಮೀಸಲು ಕ್ಷೇತ್ರಗಳಿವೆ. ಮೊದಲ ಹಂತದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳು ಸೇರಿ ಎಲ್ಲಾ ಪಕ್ಷಗಳ 1,314 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಚುನಾವಣೆಯಲ್ಲಿ ಎನ್​ಡಿಎ ಕೂಟ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹಾಗೆಯೇ ಯಾವುದೇ ಬಣ ಸೇರದೇ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷವೂ ಕಣದಲ್ಲಿದೆ.

ಇಂಡಿಯಾ ಮೈತ್ರಿಕೂಟದಲ್ಲಿ ಆರ್‌ಜೆಡಿ, ಕಾಂಗ್ರೆಸ್, ಸಿಪಿಐ(ಎಂಎಲ್), ವಿಐಪಿ, ಸಿಪಿಐ, ಸಿಪಿಐ(ಎಂ) ಹಾಗೂ ಮಾಜಿ ಕಾಂಗ್ರೆಸ್ ನಾಯಕ ಇಂದ್ರಜೀತ್ ಪ್ರಸಾದ್ ಗುಪ್ತಾ ಅವರು 2023 ರಲ್ಲಿ ಸ್ಥಾಪಿಸಿದ ಇಂಡಿಯನ್ ಇನ್ಕ್ಲೂಸಿವ್ ಪಾರ್ಟಿ (ಐಐಪಿ) ಅನ್ನು ಒಳಗೊಂಡಿದೆ.

ಬಿಹಾರದ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಜೆಡಿ(ಯು), ಎಲ್‌ಜೆಪಿ(ಆರ್‌ವಿ), ಎಚ್‌ಎಎಂ ಹಾಗೂ ಆರ್‌ಎಲ್‌ಎಂ ಪಕ್ಷವನ್ನು ಒಳಗೊಂಡಿದೆ. 2020ರ ಚುನಾವಣೆಯಲ್ಲಿ ಎನ್‌ಡಿಎ 125 ಸ್ಥಾನಗಳನ್ನು ಗೆದ್ದಿತು ಮತ್ತು ವಿರೋಧ ಪಕ್ಷದ ಮಹಾಮೈತ್ರಿಕೂಟ 110 ಸ್ಥಾನಗಳನ್ನು ಗೆದ್ದಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net