

Patna: ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) ಇನ್ನು ಒಂದು ವಾರ ಬಾಕಿ ಉಳಿದಿದ್ದು, ಎರಡು ಮೈತ್ರಿಕೂಟಗಳಾದ ಎನ್‌ಡಿಎ ಮತ್ತು ಮಹಾಘಟಬಂಧನ್ (ಎಂಜಿಬಿ) ಜಾತಿ ಲೆಕ್ಕಾಚಾರ ಹಾಕುತ್ತಿವೆ. ಪ್ರಸ್ತುತ ರಾಜಕೀಯದಲ್ಲಿ ಜಾತಿಯನ್ನು ಬದಿಗಿಟ್ಟು ಚುನಾವಣೆಯ ಲೆಕ್ಕಾಚಾರ ಹಾಕುವುದು ಕಷ್ಟದ ಮಾತು, ಆದ್ದರಿಂದ ಎಲ್ಲ ಪಕ್ಷಗಳು ಅದಕ್ಕೆ ಜೋತು ಬಿದ್ದಿವೆ.
ಮಹಾಘಟಬಂಧನ್ದ ಪ್ರಮುಖ ಘೋಷಣೆ "ಜಿಸ್ಕಿ ಜಿತ್ನಿ ಸಂಖ್ಯಾ ಭಾರಿ, ಉಸ್ಕಿ ಉತ್ನಿ ಹಿಸ್ಸೆದಾರಿ" (ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ) ಮತ್ತು ಎನ್‌ಡಿಎಯ "ಸಬ್‌ಕಾ ಸಾಥ್, ಸಬ್‌ಕಾ ವಿಶ್ವಾಸ್" ಟಿಕೆಟ್ ಹಂಚಿಕೆ ತಂತ್ರವನ್ನು ಬದಿಗಿಟ್ಟು, ಎರಡೂ ಮೈತ್ರಿಕೂಟಗಳು ತಮ್ಮ ಸಾಂಪ್ರದಾಯಿಕ ಪ್ರಚಾರ ತಂತ್ರಕ್ಕೆ ಮರಳಿದ್ದು, ಬಲವರ್ಧನೆಯ ಮೇಲೆ ಗಮನವನ್ನು ಕೇಂದ್ರೀಕರಿಸಿವೆ.
ಬಿಜೆಪಿ ನೇತೃತ್ವದ ಎನ್‌ಡಿಎ, ಮೇಲ್ಜಾತಿಯ ಮತಗಳ ಮೇಲೆ ಹೆಚ್ಚಿನ ಒಲವು ತೋರಿದ್ದು, ರಾಜ್ಯದಲ್ಲಿ ರಜಪೂತರು ಶೇಕಡಾ 21 ರಷ್ಟು ಮತ್ತು ಭೂಮಿಹಾರ್‌ಗಳು ಶೇಕಡಾ 16 ರಷ್ಟು ಟಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಅವರ ಜನಸಂಖ್ಯೆಯ ಶೇಕಡಾ 3 ರಷ್ಟು ಪಾಲನ್ನು ಮೀರಿದೆ. ಮುಸ್ಲಿಂ ಪ್ರಾತಿನಿಧ್ಯವನ್ನು ಬಹುತೇಕ ಶೂನ್ಯಕ್ಕೆ ಇಳಿಸಲಾಗಿದೆ. ಘಟಬಂದನ್ನ ಪ್ರಮುಖ ಮತಬ್ಯಾಂಕ್ ಆಗಿರುವ ಯಾದವರಿಗೆ ಬಿಜೆಪಿ ಕೇವಲ ಶೇಕಡಾ 6 ರಷ್ಟು ಟಿಕೆಟ್ಹಂಚಿಕೆ ಮಾಡಲಾಗಿದೆ.
ಜೆಡಿಯು ಯಾದವೇತರ ಒಬಿಸಿಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳ (ಇಬಿಸಿ) ಗಟ್ಟಿ ಮತಬ್ಯಾಂಕ್ ಹೊಂದಿದೆ, ನಿತೀಶ್ ಕುಮಾರ್ ಕುರ್ಮಿ ಸಮುದಾಯವನ್ನು ಪ್ರತಿನಿಧಿಸುತ್ತಿರುವುದರಿಂದ, ಪಕ್ಷವು ಕುರ್ಮಿಗಳಿಗೆ ಶೇಕಡಾ 12 ರಷ್ಟು ಮತ್ತು ಕೊಯೇರಿ / ಕುಶ್ವಾಹರಿಗೆ ಶೇಕಡಾ 13 ರಷ್ಟು ಟಿಕೆಟ್‌ಗಳನ್ನು ಹಂಚಿಕೆ ಮಾಡುವ ಮೂಲಕ ಲವ್-ಕುಶ್ ಬಣವನ್ನು ಬಲಪಡಿಸಿದೆ. ಮುಸ್ಲಿಂ ಸಮುದಾಯದತ್ತ ಜಾಸ್ತಿ ಒಲವು ತೋರದ ಆಡಳಿತರೂಢ ಎನ್‌ಡಿಎ, ಕೇವಲ ಶೇ 2 ರಷ್ಟು ಟಿಕೆಟ್ ನೀಡಿದೆ. ಬಿಹಾರದ ಜನಸಂಖ್ಯೆಯ ಶೇಕಡಾ 18 ರಷ್ಟು ಮುಸ್ಲಿಮರೆ ಇದ್ದರೂ, ರಾಜ್ಯದಲ್ಲಿ ಆ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂಬ ತನ್ನ ನೀತಿಯಲ್ಲಿ ಬಿಜೆಪಿ ರಾಜೀ ಮಾಡಿಕೊಂಡಿಲ್ಲ.
ಬಿಹಾರದಲ್ಲಿ ಆರ್‌ಜೆಡಿ ಬಲಿಷ್ಠ ವೋಟ್ ಬ್ಯಾಂಕ್ ಸಂಯೋಜನೆ ಎಂದರೆ ಅದು ಮುಸ್ಲಿಂ-ಯಾದವ್ (ಎಂವೈ), ಯಾದವರು ಶೇಕಡಾ 37 ರಷ್ಟು ಮತ್ತು ಮುಸ್ಲಿಮರು ಶೇಕಡಾ 13 ರಷ್ಟು ಟಿಕೆಟ್ ಪಡೆದಿದ್ದಾರೆ. ಈ ಹಿನ್ನಲೆಯಲ್ಲಿ ಆರ್‌ಜೆಡಿಯ ಅರ್ಧದಷ್ಟು ಅಭ್ಯರ್ಥಿಗಳು ಎಂವೈ ಸಮುದಾಯದಿಂದಲೇ ಬಂದವರು. ಕಳೆದ ಸಲದ ಮೇಲ್ಜಾತಿಯ ಪ್ರಾತಿನಿಧ್ಯವನ್ನು ಶೇಕಡಾ 8 ಕ್ಕೆ ಇಳಿಸಿರುವ ಮಹಾ ಮೈತ್ರಿಕೂಟ, ಕುಶ್ವಾಹ ಮತ್ತು ಇಬಿಸಿ ಅಭ್ಯರ್ಥಿಗಳಿಗೆ ತಲಾ ಶೇಕಡಾ 10 ರಷ್ಟು ಟಿಕೆಟ್‌ಗಳನ್ನು ನೀಡಿದೆ. ಕಾಂಗ್ರೆಸ್ ಶೇ 34 ರಷ್ಟು ಮೇಲ್ಜಾತಿ ಮತ್ತು ಶೇ 15 ರಷ್ಟು ಯಾದವೇತರ/EBC ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಮೈತ್ರಿಕೂಟದ ಆಕರ್ಷಣೆಯನ್ನು ವಿಸ್ತರಿಸಲು ಪ್ರಯತ್ನಿಸಿದೆ.
ಮೇಲ್ಜಾತಿಗಳು ಮತ್ತು ಯಾದವೇತರ ಹಿಂದುಳಿತ ವರ್ಗದವರು ಎನ್‌ಡಿಎಗೆ, ಮುಸ್ಲಿಮರು ಮತ್ತು ಯಾದವರು ಇಂಡಿಯಾ ಮೈತ್ರಿಕೂಟದ ಆಧಾರ ಸ್ಥಂಬಗಳು. ಇವರನ್ನು ಹೊರತುಪಡಿಸಿ ಯಾವ ಪಕ್ಷಕ್ಕೂ ಸೇರಿರದ(ಗೋಡೆಯ ಮೇಲೆ ಕೂತಿರುವ) ಮತದಾರರನ್ನು ಸೆಳೆಯಲು ಎರಡು ಮೈತ್ರಿಕೂಟಗಳು ತಮ್ಮದೇ ಆದ ತಂತ್ರಗಾರಿಕೆ ನಡೆಸಿವೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಅಖಿಲೇಶ್ ಯಾದವ್ರ ಎಸ್‌ಪಿಗೆ ಸಹಾಯ ಮಾಡಿದ ಪಿಡಿಎ (ಪಿಚ್ಡಾ, ದಲಿತ, ಆಲ್ಪಸಂಖ್ಯಕ್) ಒಕ್ಕೂಟದಂತೆ, ಬಿಹಾರದಲ್ಲಿ ಯಾವುದೇ ರೀತಿಯ ಯೋಜನೆಯನ್ನು ಹಾಕಿಕೊಂಡಿಲ್ಲ, ರಾಜ್ಯದಲ್ಲಿ ಇಬಿಸಿ ಮತ್ತು ಕುಶ್ವಾಹ ಪ್ರಾತಿನಿಧ್ಯ ಹೆಚ್ಚಿದ್ದರೂ, ಬದಲಾವಣೆಗಳು ಕಾರ್ಯತಂತ್ರಕ್ಕಿಂತ ಹೆಚ್ಚಾಗಿ ಯುದ್ಧತಂತ್ರವಾಗಿಯೇ ಉಳಿದಿವೆ.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್‌ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)