

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Election) ಮಹುವಾ ವಿಧಾನಸಭಾ ಕ್ಷೇತ್ರದಿಂದ ಗೆದ್ದರೆ, ಅಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವುದಷ್ಟೆ ಅಲ್ಲದೇ, ಭಾರತ-ಪಾಕಿಸ್ತಾನ ಪಂದ್ಯವನ್ನು ನಡೆಸುವುದಾಗಿ ಶನಿವಾರ( ಅ 26) ಭರವಸೆ ನೀಡಿದ್ದಾರೆ.
ಪಾಟ್ನಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ತೇಜ್ ಪ್ರತಾಪ್, ಜೆ.ಪಿ. ಲೋಹಿಯಾ, ಕರ್ಪುರಿ ಠಾಕೂರ್ ಮತ್ತು ಲಾಲು ಪ್ರಸಾದ್ ಯಾದವ್ ಸೇರಿದಂತೆ ಇತರ ಹಿರಿಯ ನಾಯಕರಂತೆ, ತೇಜಸ್ವಿ ಜನನಾಯಕರಾಗಲು ಸಾಧ್ಯವಿಲ್ಲ, ಆತ ಇಲ್ಲಿಯವರೆಗೆ ತಲುಪಲು ನನ್ನ ತಂದೆಯ ಹೆಸರು ಕಾರಣ ಎಂದರು. ಇದೇ ವೇಳೆ ತಾವು ಆರ್ಜೆಡಿಗೆ ಹಿಂತಿರುಗುವುದಿಲ್ಲ ಎಂದು ಪುನರುಚ್ಛರಿಸಿದ ಲಾಲೂ ಹಿರಿಯ ಮಗ, ತಮಗೆ ಯಾವುದೇ ಹುದ್ದೆಯ ಬಗ್ಗೆ ದುರಾಸೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರು.
ನಾನು ಇನ್ನು ಮುಂದೆ ಆರ್ಜೆಡಿಗೆ ಹಿಂತಿರುಗುವುದಿಲ್ಲ, ನನಗೆ ಯಾವುದೇ ಹುದ್ದೆಯ ಆಸೆ ಇಲ್ಲ, ಒಂದು ವೇಳೆ ಏನಾದರೂ ಆಫರ್ ಬಂದರೆ ನಾನು ಅದನ್ನು ತಿರಸ್ಕರಿಸುತ್ತೇನೆ. ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.
ಮೇ 26 ರಂದು, ಲಾಲು ಪ್ರಸಾದ್ ಯಾದವ್ ಅವರು ತೇಜ್ ಪ್ರತಾಪ್ರನ್ನು ಬೇಜವಾಬ್ದಾರಿಯುತ ನಡವಳಿಕೆ ಕಾರಣ ನೀಡಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದ್ದರು. ತೇಜ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ ಯಾದವ್ ಅವರೊಂದಿಗಿನ ತಮ್ಮ ದೀರ್ಘಕಾಲದ ಸಂಬಂಧವನ್ನು ಉಲ್ಲೇಖಿಸಿ, ಕಳೆದ 12 ವರ್ಷಗಳಿಂದ ನಾವು ಪ್ರೀತಿಸುತ್ತಿದ್ದೇವೆ ಮತ್ತು ಸಂಬಂಧದಲ್ಲಿದ್ದೇವೆ ಎಂದು ಘೋಷಿಸಿದ ಬಳಿಕ ಈ ಕ್ರಮ ಜರುಗಿಸಲಾಗಿತ್ತು. ಶುಕ್ರವಾರ ಮಾತನಾಡಿದ್ದ ತೇಜ್ ಪ್ರತಾಪ್, ಆರ್ಜೆಡಿಗೆ ಮರಳುವ ಸಾಧ್ಯತೆಯನ್ನು ತಳ್ಳಿಹಾಕುತ್ತಾ, ಒಂದು ವೇಳೆ ಅನಿವಾರ್ಯವಾಗಿ ಅಂತಹ ಪ್ರಸಂಗ ಎದುರಾದರೆ ನಾನು ಸಾವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ, ನನಗೆ ಅಧಿಕಾರದ ಹಪಾಹಪಿ ಇಲ್ಲ, ತತ್ವ ಸಿದ್ಧಾಂತ ಮತ್ತು ಸ್ವಾಭಿಮಾನವೇ ಎಲ್ಲದಕ್ಕಿಂತ ಹೆಚ್ಚು ಎಂದಿದ್ದರು.
ಆರ್ಜೆಡಿಯಿಂದ ಉಚ್ಛಾಟಿತರಾಗಿರುವ ತೇಜ್ ಪ್ರತಾಪ್, ಜನಶಕ್ತಿ ಜನತಾದಳ (ಜೆಜೆಡಿ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದು, ತಾವೂ ಸ್ಫರ್ಧೆ ನಡೆಸುತ್ತಿರುವ ಮಹುವಾ ಕ್ಷೇತ್ರದಲ್ಲಿ ಯಾವುದೇ ತರಹದ ಪೈಪೋಟಿ ಇಲ್ಲ ಎಂದಿದ್ದಾರೆ. ತೇಜಸ್ವಿ ಯಾದವ್ ಆಪ್ತ, ಮಹುವಾ ಕ್ಷೇತ್ರದ ಹಾಲಿ ಶಾಸಕ ಮುಖೇಶ್ ರೌಶನ್ಗೆ ಮತ್ತೆ ಆರ್ಜೆಡಿ ಟಿಕೆಟ್ ನೀಡಿದೆ. ಎನ್ಡಿಎ ಮೈತ್ರಿಕೂಟದಿಂದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷದ ಸಂಜಯ್ ಕುಮಾರ್ ಸಿಂಗ್ ಕಣದಲ್ಲಿದ್ದಾರೆ.
243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್)