

Bihar: ಮುಂದಿನ ತಿಂಗಳ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೂವರು ಪ್ರಭಾವಿ ನಾಯಕರು ಆಡಳಿತರೂಢ ಜೆಡಿಯು ತೊರೆದು ಲಾಲು ಪ್ರಸಾದ್ ಯಾದವ್ ನೇತೃತ್ವದಲ್ಲಿ ಆರ್‌ಜೆಡಿ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆ ಮೊದಲ ಹಂತದಲ್ಲಿ ಜೆಡಿಯುಗೆ ಭಾರಿ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪೂರ್ಣಿಯ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದ ಮಾಜಿ ಜೆಡಿಯು ಸಂಸದ ಸಂತೋಷ್ ಕುಶ್ವಾಹ ಆರ್‌ಜೆಡಿ ಸೇರ್ಪಡೆಯಾಗಿದ್ದಾರೆ. ಹಾಗೆಯೇ ಬಾಂಕಾ ಕ್ಷೇತ್ರದ ಜೆಡಿಯು ಸಂಸದ ಗಿರ್ಧಾರಿ ಚಾಣಕ್ಯ ಅವರ ಪುತ್ರ ಪ್ರಕಾಶ್ ರಂಜನ್, ಜಹಾನಬಾದ್ ಮಾಡಿ ಸಂಸದ ಜಗದೀಶ್ ಶರ್ಮಾ ಅವರ ಪುತ್ರ ರಾಹುಲ್ ಶರ್ಮಾ ಕೂಡಾ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಮಾಜಿ ಸಂಸದ ಸಂತೋಷ್ ಕುಶ್ವಾಹ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಈಗ ಮೊದಲಿನಂತಿಲ್ಲ. ಅದು ದಿಕ್ಕಿಲ್ಲದ ಪಕ್ಷವಾಗಿದೆ ಎಂದು ಹೇಳಿದ್ದಾರೆ.
ಇನ್ನು ಮೂವರನ್ನು ಸೇರ್ಪಡೆ ಮಾಡಿಕೊಂಡು ಮಾತನಾಡಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಅವರು ಸಿಎಂ ಆಗಿ ಕಾರ್ಯನಿರ್ವಹಿಸುತ್ತಿಲ್ಲ. ನವದೆಹಲಿಯಲ್ಲಿ ಬಿಜೆಪಿಯ ಆಯ್ದ ಜನರು ರಿಮೋಟ್ ಕಂಟ್ರೋಲ್ ಮೂಲಕ ಬಿಹಾರವನ್ನು ಆಳುತ್ತಿದ್ದಾರೆ. ಸಿಎಂ ಆಗಿ ನಿತೀಶ್ ಅವರದು ಇದೇ ಕೊನೆಯ ಇನ್ನಿಂಗ್ಸ್ ಎಂದಿದ್ದಾರೆ.
ಜೆಡಿಯು ಸಚಿವೆ ಲೆಸಿ ಸಿಂಗ್ ಪ್ರತಿನಿಧಿಸುವ ಧಮ್ದಾಹಾ ವಿಧಾನಸಭಾ ಸ್ಥಾನಕ್ಕೆ ಸಂತೋಷ್ ಕುಶ್ವಾಹ ಆರ್‌ಜೆಡಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಸಿಪಿಐ(ಎಂಎಲ್) ಹಾಲಿ ಶಾಸಕ ರಾಂಬಲಿ ಸಿಂಗ್ ಯಾದವ್ ಅವರನ್ನು ಹೊಂದಿರುವ ಮತ್ತು ಆರ್‌ಜೆಡಿಗೆ ತನ್ನ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲದ ಘೋಸಿ ಕ್ಷೇತ್ರಕ್ಕೆ ಶರ್ಮಾ ಆರ್‌ಜೆಡಿ ಅಭ್ಯರ್ಥಿಯಾಗಬಹುದು ಎನ್ನಲಾಗಿದೆ. (ಏಜೆನ್ಸೀಸ್)