ಬಿಹಾರದಲ್ಲಿ ಹಿಂದುಳಿದ ವರ್ಗಗಳಿಗೆ ದೊಡ್ಡ ಗಿಫ್ಟ್; ಶೇ.75 ಮೀಸಲಾತಿ ಮಸೂದೆ ಸರ್ವಾನುಮತದಿಂದ ಅಂಗೀಕಾರ

nithish
Published on

ಪಾಟ್ನಾ: ಗುರುವಾರ ಬಿಹಾರ ವಿಧಾನಸಭೆಯಲ್ಲಿ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಬಿಹಾರ ವಿಧಾನಸಭೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾದ ಕೂಡಲೇ ಶೇ.75 ಮೀಸಲಾತಿ ತಿದ್ದುಪಡಿ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಯಿತು. ಅಂದರೆ ಬಿಹಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶೇಕಡ 50 ರಿಂದ 65 ಕ್ಕೆ ಹೆಚ್ಚಿಸಲಾಗುವುದು. 10ರಷ್ಟು ಮೀಸಲಾತಿಯ ಲಾಭ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸಿಗಲಿದೆ. ಅಂದರೆ ಬಿಹಾರದಲ್ಲಿ ಒಟ್ಟು ಮೀಸಲಾತಿ ಶೇ.75ರಷ್ಟಾಗಿದೆ.

ಮಂಗಳವಾರವೇ ಪ್ರಸ್ತಾವನೆ ಮುಂದಿಟ್ಟಿದ್ದ ನಿತೀಶ್ 

ಮಂಗಳವಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾತಿ ಆಧಾರಿತ ಲೆಕ್ಕಾಚಾರದ ಆಧಾರದ ಮೇಲೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯಾಪ್ತಿಯನ್ನು 75 ಪ್ರತಿಶತಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದ್ದರು. ಜಾತಿ ಆಧಾರಿತ ಜನಗಣತಿ ವರದಿಯು ರಾಜ್ಯದ ಬಡತನವನ್ನು ಬಹಿರಂಗಪಡಿಸುತ್ತದೆ ಎಂದು ಅವರು ಹೇಳಿದರು.

ಮೇಲ್ಜಾತಿ ಬಡವರಿಗೆ ಶೇ 10ರಷ್ಟು ಮೀಸಲಾತಿ

ಮೇಲ್ಜಾತಿ ಬಡವರಿಗೆ ಶೇ 10ರಷ್ಟು ಮೀಸಲಾತಿ ಹಾಗೆಯೇ ಇರುತ್ತದೆ ಎಂದು ಮುಖ್ಯಮಂತ್ರಿ ಸದನಕ್ಕೆ ತಿಳಿಸಿದರು. ಇದರಲ್ಲಿ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಹಿಂದುಳಿದ ವರ್ಗಗಳ ಮಹಿಳೆಯರಿಗೆ ನೀಡಿರುವ ಶೇಕಡ ಮೂರರಷ್ಟು ಮೀಸಲಾತಿಯನ್ನು ಈಗಾಗಲೇ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯಲ್ಲಿ ಸರಿಹೊಂದಿಸಲಾಗುವುದು. ಏಕೆಂದರೆ, ರಾಜ್ಯ ಸರ್ಕಾರ ಈಗಾಗಲೇ ಮಹಿಳೆಯರಿಗೆ ಶೇ.35ರಷ್ಟು ಮೀಸಲಾತಿ ನೀಡುತ್ತಿದೆ.

ಮೀಸಲಾತಿ ಮಿತಿಯನ್ನು 75% ಗೆ ಹೆಚ್ಚಿಸಲು ಸರ್ಕಾರವು ಪ್ರಸ್ತಾವನೆಯನ್ನು ಅಂಗೀಕರಿಸಿದ ದೇಶದ ಮೊದಲ ರಾಜ್ಯ ಬಿಹಾರ. ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಹಾಮೈತ್ರಿ ಸರ್ಕಾರವೂ ಈ ಪ್ರಸ್ತಾವನೆಗೆ ಸಂಪುಟದಿಂದ ಅನುಮೋದನೆ ನೀಡಿದೆ. ಹಿಂದುಳಿದ ವರ್ಗದ ಒಬಿಸಿಗೆ ಶೇ 18, ಅತ್ಯಂತ ಹಿಂದುಳಿದ ಒಬಿಸಿಗೆ ಶೇ 25, ಎಸ್‌ಸಿಗೆ ಶೇ 20 ಮತ್ತು ಎಸ್‌ಟಿಗೆ ಶೇ 2 ಮೀಸಲಾತಿಯ ಪ್ರಸ್ತಾವನೆಯನ್ನು ನಿತೀಶ್ ಸರ್ಕಾರ ಅಂಗೀಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net