

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಮುಕ್ತಾಯದ ಹಂತ ತಲುಪಿದ್ದು, ಜನವರಿ 26ಕ್ಕೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇನ್ನೂ ಟಾಸ್ಕ್ ವಿಚಾರಕ್ಕೆ ಬರುವುದಾದರೆ ಸ್ಫರ್ಧಿಗಳು ಫಿನಾಲೆಯ ಟಿಕೆಟ್ ಪಡೆಯಲು ನಾ ಮುಂದು, ತಾ ಮುಂದು ಎಂಬಂತೆ ಹೋರಾಡುತ್ತಿದ್ದು, ದಿನ ಕಳೆದಂತೆ ಶೋ ರೋಚಕತೆ ಹೆಚ್ಚಿಸುತ್ತಿದೆ.
ಇರುವ 9 ಸ್ಫರ್ಧಿಗಳ ಪೈಕಿ ನಾಲ್ವರು ಫಿನಾಲೆಯ ಟಿಕೆಟ್ಅನ್ನು ಪಡೆದುಕೊಂಡಿದ್ದು, ಇದನ್ನು ಕೊಡಲು ಬಿಗ್ಬಾಸ್ ಮನೆಗೆ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಟಿಕೆಟ್ ಟು ಫಿನಾಲೆ ಟಾಸ್ಕ್ಗೆ ಕ್ಯಾಪ್ಟನ್ ರಜತ್, ಭವ್ಯ, ಹನುಮಂತು ಹಾಗೂ ತ್ರಿವಿಕ್ರಮ್ ಆಯ್ಕೆಯಾಗಿದ್ದು, ಗೆದ್ದವರಿಗೆ ಫಿನಾಲೆ ಟಿಕೆಟ್ ಕೊಡಲು ಅದಿತಿ ಪ್ರಭುದೇವ ಹಾಗೂ ಶರಣ್ ಬಿಗ್ಬಾಸ್ (BiggBoss) ಮನೆಗೆ ಆಗಮಿಸಿದ್ದಾರೆ. ಯಾರಾಗ್ತಾರೆ ನೇರವಾಗಿ ಫಿನಾಲೆ ತಲುಪೋ ಅದೃಷ್ಟಶಾಲಿ ಸ್ಪರ್ಧಿ? ಎಂಬ ಶೀರ್ಷಿಕೆಯಡಿ ಪ್ರೋಮೋವನ್ನು ರಿಲೀಸ್ ಮಾಡಲಾಗಿದೆ.
ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ ರಜತ್, ಹನುಮಂತ, ಭವ್ಯ ಹಾಗೂ ತ್ರಿವಿಕ್ರಮ್ ಪೈಕಿ ಒಬ್ಬರಿಗೆ ಇಂದಿನ ಸಂಚಿಕೆಯಲ್ಲಿ ಗ್ರ್ಯಾಂಡ್ ಫಿನಾಲೆ ಟಿಕೆಟ್ ಸಿಕ್ಕಿದೆ. ಸದ್ಯ ನೀಡಲಾಗಿರುವ ಟಾಸ್ಕ್ ವಿಚಾರಕ್ಕೆ ಬರುವುದಾದರೆ ನಾಲ್ವರು ಸ್ಪರ್ಧಿಗಳು ಎಷ್ಟು ವೇಗವಾಗಿ, ಚೆನ್ನಾಗಿ, ಯಾವುದೇ ರೂಲ್ ಬ್ರೇಕ್ ಮಾಡದಂತೆ ಕಡಿಮೆ ಅವಧಿಯಲ್ಲಿ ಮುಗಿಸುತ್ತಾರೋ ಅವರಿಗೆ ಫಿನಾಲೆ ಬಾಗಿಲು ಓಪನ್ ಆಗಿರುತ್ತದೆ. ಇದಲ್ಲದೆ ಎಲಿಮಿನೇಷನ್ ವಿಚಾರಕ್ಕೆ ಬರುವುದಾದರೆ ಈ ವಾರ ಇಬ್ಬರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ ಎಂದು ಹೇಳಲಾಗಿದ್ದು, ವಾರಾಂತ್ಯದಲ್ಲಿ ಸುದೀಪ್ ಅವರು ನಡೆಸಿಕೊಡುವ ಕಿಚ್ಚನ ಪಂಚಾಯಿತಿಯಲ್ಲಿ ಅಂತಿಮ ಚಿತ್ರಣ ಹೊರಬೀಳಲಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.