ಜೈಲಿನಿಂದ ರಿಲೀಸ್​ ಬಳಿಕ ವಿಡಿಯೋ ಮಾಡಿ ವಿನಯ್​ಗೌಡ ಕ್ಷಮೆಯಾಚನೆ! Biggboss

vinay
Published on

Biggboss| ಸೋಷಿಯಲ್‌ ಮೀಡಿಯಾದಲ್ಲಿ ಲಾಂಗ್‌ ಹಿಡಿದು ರೀಲ್ಸ್ ಮಾಡಿದ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದ ಬಿಗ್​ಬಾಸ್​ ಸ್ಪರ್ಧಿ ರಜತ್ ಕಿಶನ್​​ ಹಾಗೂ ವಿನಯ್​ಗೌಡ ಇಬ್ಬರು ಕೂಡ ಜಾಮೀನಿನ ಮೇಲೆ ಶನಿವಾರ (29) ಬಿಡುಗಡೆಯಾಗಿದ್ದಾರೆ. ಇದೀಗ ವಿನಯ್​ಗೌಡ ಹೊರ ಬರುತ್ತಿದ್ದಂತೆ ಕ್ಷಮೆಯಾಚಿಸುವ ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಕ್ಷಮೆ ಕೇಳಿದ ವಿನಯ್​ಗೌಡ!

ಎಲ್ಲರಿಗೂ ನಮಸ್ಕಾರ. ಇಡೀ ನಾಡಿನ ಜನತೆ, ನನ್ನ ಅಭಿಮಾನಿಗಳು, ಸ್ನೇಹಿತರಿಗೆ ನಾನು ಕ್ಷಮೆ ಕೇಳುತ್ತೇನೆ. ನೀವು ಒಂದು ಮಚ್ಚಿನ ಕತೆಯನ್ನು ನೋಡುತ್ತಿದ್ದೀರಿ. ನಾವು ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದೆವು. ಇದರಿಂದ ತುಂಬಾ ಜನರಿಗೆ ಸಮಸ್ಯೆ ಆಗಿದೆ. ನಮ್ಮನ್ನು ಹೊರಗಡೆ ಕರೆದುಕೊಂಡು ಬರಲು ನನ್ನ ಕುಟುಂಬ, ಸ್ನೇಹಿತರು ಒದ್ದಾಡಿದ್ದಾರೆ. ಪೊಲೀಸ್‌ ಠಾಣೆ, ಕೋರ್ಟ್, ಕೇಂದ್ರ ಕಾರಾಗೃಹ ಎಂದು ಹಗಲು-ರಾತ್ರಿ ಓಡಾಡಿದ್ದಾರೆ. ಅದು ರಜತ್‌ಗೆ ಕೊಟ್ಟಿದ್ದ ಪ್ರಾಪರ್ಟಿ ಆಗಿತ್ತು, ನಾನು ಅದನ್ನ ತೆಗೆದುಕೊಂಡು 18 ಸೆಕೆಂಡ್‌ ರೀಲ್ಸ್‌ ಮಾಡಿದ್ದೇನೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ಇರಲಿ ಎಂದು ವಿನಯ್​ಗೌಡ ಹೇಳಿದ್ದಾರೆ.

ಏನಿದು ಪ್ರಕರಣ?

ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ಗೌಡ ಮತ್ತು ರಜತ್​ ಇಬ್ಬರೂ ರೀಲ್ಸ್​ ಮಾಡುವ ಸಂದರ್ಭದಲ್ಲಿ ಮಚ್ಚು ಹಿಡಿದುಕೊಂಡು ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಹೀಗಾಗಿ ಇವರಿಬ್ಬರ ಮೇಲೆ ​ಶಸ್ತ್ರಾಸ್ತ್ರ ಕಾಯ್ದೆಯಡಿ FIR ​ದಾಖಲಾಗಿತ್ತು. ಇದಾದ ಬಳಿಕ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದರೆ, ರಜತ್​ ಹಾಗೂ ವಿನಯ್​ ಫೈಬರ್​ ಮಚ್ಚು ನೀಡಿ ಪೊಲೀಸರಿಗೆ ಯಾಮಾರಿಸಿದ್ದರು. ಹೀಗಾಗಿ ಪೊಲೀಸರು ಆ ರಿಯಲ್ ಮಚ್ಚಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಪ್ರಕರಣದಲ್ಲಿ ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್​ ಆದೇಶ ಹೊರಡಿಸಿದ್ದು, ತಲಾ 10 ಸಾವಿರ ರೂ. ಶ್ಯೂರಿಟಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net