ಬಿಗ್​ಬಾಸ್​ನಲ್ಲಿ ಕಿರಿಕಿರಿ ಮಾಡಿ ಹೊರಬಂದಿದ್ದ ಸ್ಪರ್ಧಿ ನಿಧನ; ಈ ಸ್ಪರ್ಧಿ ಮೇಲಿತ್ತು ಹಲವು ಕೇಸ್​!

bb
Published on

ಮುಂಬೈ: ಬಿಗ್​ಬಾಸ್​ ಖ್ಯಾತಿಯ ಸ್ವಯಂ ಘೋಷಿತ ದೇವಮಾನವ ವಿನೋದಾನಂದ್​ ಝಾ ಬುಧವಾರದಂದು ಕೊನೆಯುಸಿರೆಳೆದಿದ್ದಾರೆ. ಸ್ವಾಮಿ ಓಂ ಎಂದೇ ಪ್ರಸಿದ್ಧರಾಗಿದ್ದ ಅವರು ಪಾರ್ಶ್ವವಾಯುವಿನಿಂದಾಗಿ ಮೃತರಾಗಿರುವುದಾಗಿ ತಿಳಿಸಲಾಗಿದೆ. ಮೃತರ ಅಂತ್ಯಸಂಸ್ಕಾರವನ್ನು ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ನಡೆಸಲಾಗುವುದು.

ಹಿಂದಿಯ ಬಿಗ್​ಬಾಸ್​ 10ರಲ್ಲಿ ಭಾಗವಹಿಸಿದ್ದ ವಿನೋದಾನಂದ್​ ಸಾಕಷ್ಟು ವಿಚಾರಗಳಲ್ಲಿ ಚರ್ಚೆಗೆ ಬಂದಿದ್ದರು. ಬಿಗ್​ಬಾಸ್​ ಮನೆಯ ಸಹಸ್ಪರ್ಧಿಗಳಿಗೆ ಕಿರಿಕಿರಿ ಮಾಡುವುದರ ಜತೆ ಮಹಿಳೆಯರ ಬಗ್ಗೆ ಅವಹೇಳನಕಾರಿ ಕಾಮೆಂಟ್​ ಮಾಡುತ್ತಿದ್ದರು. ಇಬ್ಬರು ಸಹಸ್ಪರ್ಧಿಗಳ ಮೇಲೆ ಮೂತ್ರ ಮಾಡಿದ್ದ ಕಾರಣದಿಂದಾಗಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿತ್ತು.

ಈ ಸ್ವಯಂ ಘೋಷಿತ ದೇವಮಾನವನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಇವೆ. ಸಹಚರನೊಂದಿಗೆ ಸೇರಿ ನನ್ನ ಬಟ್ಟೆ ಹರಿದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು 2017ರಲ್ಲಿ ದೂರು ನೀಡಿದ್ದರು. ಆತ ಬೆದರಿಕೆ ಹಾಕಿದ್ದಾನೆ ಎಂದೂ ದೂರಿನಲ್ಲಿ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ 2008ರ ನವೆಂಬರ್‌ನಲ್ಲಿ ಓಂ ವಿರುದ್ಧ ದೆಹಲಿಯ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾಲೋನಿಯಲ್ಲಿರುವ ಬೈಸಿಕಲ್ ಅಂಗಡಿಗೆ ನುಗ್ಗಿ 11 ಬೈಸಿಕಲ್, ದುಬಾರಿ ಬಿಡಿಭಾಗಗಳು ಮತ್ತು ಪ್ರಮುಖ ದಾಖಲೆಗಳನ್ನು ಕದ್ದಿದ್ದಾನೆ ಎಂದು ಆರೋಪಿಸಲಾಗಿತ್ತು.

ಇಂತಹ ಕ್ರಿಮಿನಲ್​ ಹಿನ್ನೆಲೆ ಹೊಂದಿರುವ ಓಂ, ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂರು ತಿಂಗಳ ಹಿಂದೆ ಕರೊನಾ ಸೋಂಕೂ ತಗುಲಿತ್ತು. ಸೋಂಕಿನಿಂದ ಚೇತರಿಸಿಕೊಂಡಿದ್ದರಾದರೂ ನಡೆಯಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net