ಜಗನ್‌ಗೆ ಭಾರೀ ಹಿನ್ನಡೆ: YSRCPಯ ಇಬ್ಬರು ರಾಜ್ಯಸಭಾ ಸದಸ್ಯರ ರಾಜೀನಾಮೆ: TDP ಸೇರುವ ಸಾಧ್ಯತೆ!

mp
Published on

ನವದೆಹಲಿ: ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಪಕ್ಷದ ರಾಜ್ಯಸಭೆ ಸದಸ್ಯರಾದ ಮೋಪಿದೇವಿ ವೆಂಕಟರಮಣ ಮತ್ತು ಬೀಡಾ ಮಸ್ತಾನ್‌ ರಾವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಗುರುವಾರ ರಾಜೀನಾಮೆ ಪತ್ರ ಸಲ್ಲಿಸಿದರು. ಅದು ಅಂಗೀಕಾರಗೊಂಡಿದೆ ಎಂದು ಸಂಸತ್ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಬೀಡಾ ಮಸ್ತಾನ್‌ ರಾವ್‌ ಅವಧಿಯು 2028ಕ್ಕೆ ಕೊನೆಗೊಳ್ಳುತ್ತಿತ್ತು. ಈ ಮೊದಲು ಅವರು ಟಿಡಿಪಿ ತೊರೆದು ವೈಎಸ್​ಆರ್​ಸಿಪಿ ಸೇರಿದ್ದರು. ಈಗ ಆಡಳಿತರೂಢ ತೆಲುಗು ದೇಶಂ ಪಕ್ಷ (ಟಿಡಿಪಿ)ಗೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.  ಮೋಪಿದೇವಿ ವೆಂಕಟರಮಣ ಅವರ ಅವಧಿ 2026ಕ್ಕೆ ಕೊನೆಗೊಳ್ಳುತ್ತಿದ್ದು, ಅವರು ಟಿಡಿಪಿ ಸೇರುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರ ನಾಯಕತ್ವದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ದುಡಿಯುವುದಾಗಿ ಇಬ್ಬರು ತಿಳಿಸಿದ್ದಾರೆ. ಅವರು ಇತ್ತೀಚೆಗೆ ನಾಯ್ಡು ಅವರನ್ನು ಭೇಟಿ ಮಾಡಿ ಟಿಡಿಪಿ ಪಕ್ಷಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಟಿಡಿಪಿಯು ಮಸ್ತಾನ್ ರಾವ್ ಅವರನ್ನು ರಾಜ್ಯಸಭೆಗೆ ಮರು ನಾಮನಿರ್ದೇಶನ ಮಾಡಬಹುದು ಆದರೆ ಮೋಪಿದೇವಿ ವೆಂಕಟರಮಣ ಅವರು ಯಾವುದೇ ಬೇಡಿಕೆ ಇಲ್ಲದೆ ಟಿಡಿಪಿ ಸೇರಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 175 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಅದರಲ್ಲಿ ಟಿಡಿಪಿ 135 ಸದಸ್ಯರನ್ನು ಹೊಂದಿದ್ದರೆ ಅದರ ಮಿತ್ರಪಕ್ಷಗಳಾದ ಜನಸೇನೆ ಮತ್ತು ಬಿಜೆಪಿ ಕ್ರಮವಾಗಿ 21 ಮತ್ತು 8 ಸ್ಥಾನಗಳನ್ನು ಹೊಂದಿವೆ.

ಜಗನ್ ಮೋಹನ್ ರೆಡ್ಡಿ ಮತ್ತು ಅವರ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರ ಸಂಪುಟದಲ್ಲಿ ಮೋಪಿದೇವಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2019 ರ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋತಿದ್ದರೂ, ಜಗನ್ ಅವರನ್ನು ಎಂಎಲ್‌ಸಿಯನ್ನಾಗಿ ಮಾಡಿ ತನ್ನ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಅವರು ಜೂನ್ 2020 ರವರೆಗೆ ಅಬಕಾರಿ ಮತ್ತು ನಿಷೇಧ ಸಚಿವರಾಗಿ ಸೇವೆ ಸಲ್ಲಿಸಿದರು, ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಮೋಪಿದೇವಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದರು ನಂತರ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದರು.

ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು, ಮಹಾರಾಷ್ಟ್ರದಿಂದ ಮೂರು, ಅಸ್ಸಾಂ ಮತ್ತು ಬಿಹಾರದಿಂದ ತಲಾ ಎರಡು, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರಾ, ಒಡಿಸ್ಸಾ, ತೆಲಂಗಾಣದಿಂದ ತಲಾ ಒಂದು, ಆಂಧ್ರಪ್ರದೇಶದಿಂದ ಎರಡು ಸ್ಥಾನ ಸೇರಿದಂತೆ ಒಟ್ಟು 19 ಸ್ಥಾನಗಳು ಖಾಲಿ ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net