ಸೆಲೆಬ್ರಿಟಿಗಳು ಪಬ್‌ನಲ್ಲಿ ತಡರಾತ್ರಿವರೆಗೂ ಮದ್ಯದ ಪಾರ್ಟಿ ಮಾಡಿಲ್ಲ!

Darshan
Published on

ಬೆಂಗಳೂರು: ಜೆಟ್‌ಲಾಗ್ ಪಬ್‌ನಲ್ಲಿ ನಟ ದರ್ಶನ್ ಸೇರಿ ಕೆಲ ಸೆಲಿಬ್ರಿಟಿಗಳು ತಡರಾತ್ರಿವರೆಗೂ ಮದ್ಯದ ಪಾರ್ಟಿ ಮಾಡಿದ ಆರೋಪದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸುಬ್ರಮಣ್ಯನಗರ ಠಾಣೆ ಪೊಲೀಸರು, ೩೯ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ನಟ ದರ್ಶನ್ ಸೇರಿ ೮ ಮಂದಿ ಸೆಲೆಬ್ರಿಟಿಗಳು ಪಬ್‌ನಲ್ಲಿ ತಡರಾತ್ರಿವರೆಗೂ ಮದ್ಯದ ಪಾರ್ಟಿ ಮಾಡಿಲ್ಲ. ಬದಲಾಗಿ ಊಟ ಮಾಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ನಟ ದರ್ಶನ್ ಸೇರಿ ಎಂಟು ಮಂದಿ ಸೆಲಿಬ್ರಿಟಿಗಳನ್ನು ಸಾಕ್ಷ್ಯಗಳಾಗಿ ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಕಾನೂನುಮೀರಿ ತಡರಾತ್ರಿ ವರೆಗೂ ರೆಸ್ಟೋಬಾರ್ ತೆರೆದಿದ್ದ ಆರೋಪದಡಿ ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಜಗದೀಶ್ ಮತ್ತು ಕ್ಯಾಶಿಯರ್ ಪ್ರಶಾಂತ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅವಧಿ ಮೀರಿ ರೆಸ್ಟೋಬಾರ್ ತೆರೆದಿದ್ದಕ್ಕೆ ಸಿಸಿ ಕ್ಯಾಮರಾ ದೃಶ್ಯಾವಳಿಗಳು, ಅಲ್ಲಿನ ಕೆಲಸಗಾರರ ಹೇಳಿಕೆಗಳನ್ನು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಹಾಗೂ ನಟ ದರ್ಶನ್ ಅಭಿಯನಯದ ಕಾಟೇರಾ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರ ತಂಡವು ಜ.೩ರ ರಾತ್ರಿ ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ಜೆಟ್‌ಲಾಗ್ ರೆಸ್ಟೋಬಾರ್‌ನಲ್ಲಿ ಪಾರ್ಟಿ ಆಯೋಜಿಸಿತ್ತು. ಈ ಪಾರ್ಟಿಯಲ್ಲಿ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ನಟರಾದ ನೀನಾಸಂ ಸತೀಶ್, ಡಾಲಿ ಧನಂಜಯ, ಚಿಕ್ಕಣ್ಣ ಸೇರಿ ಹಲವು ಸೆಲಿಬ್ರಿಟಿಗಳು ಸೇರಿದ್ದರು. ಅಂದು ತಡರಾತ್ರಿವರೆಗೂ ಮದ್ಯದ ಪಾರ್ಟಿ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸುಬ್ರಮಣ್ಯನಗರ ಠಾಣೆ ಪೊಲೀಸರು ಪಬ್‌ನ ಮಾಲೀಕರು ಹಾಗೂ ಕ್ಯಾಶಿಯರ್ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿದ್ದರು. ಅಂದು ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಸೇರಿ ಎಂಟು ಮಂದಿ ಸೆಲಿಬ್ರಿಟಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಎಂಟು ಮಂದಿಯೂ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದರು. ನಾವು ರೆಸ್ಟೋಬಾರ್‌ಗೆ ಊಟ ಮಾಡಲು ಹೋಗಿದ್ದವು. ಅಲ್ಲಿ ಯಾವುದೇ ಮದ್ಯ ಸೇವಿಸಿರಲಿಲ್ಲ. ಊಟ ಮಾಡಿ ಸ್ವಲ್ಪ ತಡವಾಗಿ ಮನೆಗಳಿಗೆ ತೆರಳಿದ್ದೆವು ಎಂದು ಹೇಳಿಕೆ ನೀಡಿದ್ದರು. ತನಿಖೆ ವೇಳೆ ನಟರು ಮದ್ಯದ ಪಾರ್ಟಿ ಮಾಡಿದ್ದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಅವರನ್ನೇ ಸಾಕ್ಷ್ಯಗಳಾಗಿ ಪರಿಗಣಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net