ಜು.26ಕ್ಕೆ ವೀರಶೈವ ಲಿಂಗಾಯತ ಸಮಾಜದ ಬೃಹತ್ ಸಭೆ

Bekkina Kalmath Sri Dr. Mallikarjuna Murugharajendra Swamiji press meet
ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಮಾತನಾಡಿದರು.
Published on

ಶಿವಮೊಗ್ಗ: ಸಮಸ್ತ ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಶಿಫಾರಸ್ಸು ಮಾಡಲು ವಿವಿಧ ವೀರಶೈವ ಲಿಂಗಾಯತ ಮಠಾಧೀಶರು, ಜನಪ್ರತಿನಿಧಿಗಳು, ಪ್ರಮುಖರು ಮತ್ತು ಸಮಾಜ ಬಾಂಧವರ ಬೃಹತ್ ಸಭೆಯನ್ನು ಜು.26ರಂದು ಬೆಳಗ್ಗೆ 10.30ಕ್ಕೆ ಜೆ.ಎಚ್.ಪಟೇಲ್ ಬಡಾವಣೆಯ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ತಿಳಿಸಿದರು.

ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ, ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಮುಖರ ಸಭೆ ನಡೆಯಲಿದ್ದು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸಭೆ ಮೂಲಕ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಲಿಂಗಾಯತ ಸಮಾಜ ದೊಡ್ಡದಾಗಿದ್ದು ಸಮಾಜಕ್ಕೆ ಒಗ್ಗಟ್ಟು ಎನ್ನುವುದು ಅನಿವಾರ್ಯವಾಗಿದೆ. ಒಂದು ಕಾಲದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಮಾಜ ಹಿಂದುಳಿದಿತ್ತು. ಇಂದು ಕೆಲವರು ಆರ್ಥಿಕವಾಗಿ ಸ್ಥಿತಿವಂತರಾಗಿದ್ದರೂ ಅನೇಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ರಾಜ್ಯದಲ್ಲಿರುವ ವೀರಶೈವ ಲಿಂಗಾಯತ ಸಮಾಜವನ್ನು ಮೇಲೆತ್ತುವ ಕೆಲಸ ಆಗಬೇಕಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದಾಗಲೇ ಭೀಮಣ್ಣ ಖಂಡ್ರೆ ಅವರು ಸದನದಲ್ಲಿ ಕೇಂದ್ರದ ಒಬಿಸಿ ಮೀಸಲಾತಿ ಬಗ್ಗೆ ಹೋರಾಟ ಮಾಡಿದ್ದರು. ಆದರೆ ಅಲ್ಲಿಂದ ಇಲ್ಲಿವರೆಗೂ ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಕೆಲಸ ಆಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೀಸಲಾತಿ ಬೇರೆ ಬೇರೆಯಾಗಿವೆ. ರಾಜ್ಯದಲ್ಲಿ ವೀರಶೈವ ಲಿಂಗಾಯತರಿಗೆ 3ಡಿ ಮೀಸಲಾತಿ ಇದ್ದು ಅದರಲ್ಲಿ ಕೆಲವೇ ಕೆಲವು ಸೌಲಭ್ಯಗಳು ಸಿಗುತ್ತಿವೆ. ಕೇಂದ್ರದ ಒಬಿಸಿ ಮೀಸಲಾತಿ ಸಾಕಷ್ಟು ಸೌಲಭ್ಯಗಳು ದೊರೆಯುತ್ತವೆ ಎಂದು ಹೇಳಿದರು.
ಈಗಾಗಲೇ ಕೇಂದ್ರದ ಒಬಿಸಿಯಲ್ಲಿ 16 ಒಳಪಂಗಡಗಳು ಸೇರ್ಪಡೆ ಆಗಿವೆ. ಇನ್ನೂ 80ಕ್ಕೂ ಅಧಿಕ ಪಂಗಡಗಳು ಹೊರಗಿವೆ. ಅದರಲ್ಲಿ ವೀರಶೈವ ಲಿಂಗಾಯತ ಸಮಾಜ ಕೂಡ ಒಂದಾಗಿದ್ದು ಈ ಸಮಾಜವನ್ನೂ ಜತೆ ಜತೆಯಾಗಿಯೇ ಕರೆದೊಯ್ಯುವ ಕೆಲಸ ಆಗಬೇಕಿದೆ ಎಂದರು. ಜಡೆಯ ಶ್ರೀ ಡಾ. ಮಹಾಂತ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಉಪಾಧ್ಯಕ್ಷ ಎಸ್.ಪಿ.ದಿನೇಶ್, ಪಿ.ರುದ್ರೇಶ್, ಮಹಾಲಿಂಗ ಶಾಸ್ತ್ರಿ, ಮಹೇಶ್‌ಮೂರ್ತಿ, ರುದ್ರಾರಾಧ್ಯ, ಟಿ.ಬಿ.ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net