

ನವದೆಹಲಿ: ಜಗತ್ತಿನೆಲ್ಲೆಡೆಯಂತೆ ಭಾರತದಲ್ಲೂ ಕೋವಿಡ್-19 ಸೋಂಕು ತನ್ನ ಕರಿಛಾಯೆ ಬೀರಿದ್ದು, ಇದರಿಂದಾಗಿ ಎಷ್ಟೋ ಜನರ ಜೀವನ ಸಂಕಷ್ಟಕ್ಕೆ ಒಳಗಾಗಿದೆ. ದೊಡ್ಡಮಟ್ಟದಲ್ಲಿ ಉದ್ಯೋಗಿಗಳು ಕೆಲಸಗಳನ್ನೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಲೋಕಲ್ಸರ್ಕಲ್ಸ್ ಎಂಬ ಸಂಸ್ಥೆ ಸಮೀಕ್ಷೆಯನ್ನೂ ನಡೆಸಿದೆ.
ಎಂಎಸ್ಎಂಇ ಹಾಗೂ ಸ್ಟಾರ್ಟಪ್ಸ್ ಕೇಂದ್ರಿತವಾಗಿ ಈ ಸಮೀಕ್ಷೆ ನಡೆದಿದ್ದು, ಕೋವಿಡ್-19 ಹಾವಳಿ ಬಳಿಕದ ಸ್ಥಿತಿಗಳ ಕುರಿತು ಕೇಳಲಾಗಿದೆ. ಆ ಪೈಕಿ ಶೇ. 25 ಮಂದಿ ತಮ್ಮ ಸಂಸ್ಥೆಗಳನ್ನೇ ಮುಚ್ಚಿದ್ದು, ಶೇ. 15 ಮಂದಿ ಕೆಲಸಗಾರರ ಸಂಖ್ಯೆಯನ್ನು ಶೇ. 50ಕ್ಕೆ ಇಳಿಸಿದ್ದಾಗಿ ಹೇಳಿದ್ದಾರೆ. ಶೇ. 19 ಮಂದಿ ತಮ್ಮ ಕೆಲಸಗಾರರ ಸಂಖ್ಯೆಯನ್ನು ಶೇ. 25ರಿಂದ 50ರಷ್ಟು ಕಡಿತಗೊಳಿಸಿದ್ದಾಗಿ ಹಾಗೂ ಇನ್ನೊಂದು ಶೇ. 19 ಮಂದಿ ಶೇ. 25ರವರೆಗೆ ಕೆಲಸಗಾರರ ಸಂಖ್ಯೆಯನ್ನು ಇಳಿಸಿದ್ದಾಗಿ ಹೇಳಿದೆ. ಮತ್ತೊಂದೆಡೆ ಶೇ. 6 ಮಂದಿ ತಮ್ಮ ಕೆಲಸಗಾರರ ಸಂಖ್ಯೆ ಹೆಚ್ಚಿಸಿಕೊಂಡಿದ್ದರೆ, ಶೇ. 16 ಮಂದಿ ಕೋವಿಡ್ ಮುಂಚೆ ಇದ್ದಷ್ಟೇ ಕೆಲಸಗಾರರನ್ನು ಉಳಿಸಿಕೊಂಡಿದ್ದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಕಳೆದ ಎಂಟು ತಿಂಗಳಲ್ಲಿ ಶೇ. 78ರಷ್ಟು ಎಂಎಸ್ಎಂಇ ಹಾಗೂ ಸ್ಟಾರ್ಟಪ್ಸ್ ತನ್ನ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಪ್ರಕಾರ ಮಾರ್ಚ್ನಿಂದ ಆಗಸ್ಟ್ವರೆಗೆ 60 ಲಕ್ಷ ಭಾರತೀಯರು ವೈಟ್ ಕಾಲರ್ ಜಾಬ್ಗಳನ್ನು ಕಳೆದುಕೊಂಡಿದ್ದಾರೆ. ಇದಕ್ಕಾಗಿ ಸಂಸ್ಥೆ 104 ಟಾಪ್ ಬಿಜಿನೆಸ್ ಜಿಲ್ಲೆಗಳಲ್ಲಿನ 7000 ಎಂಎಸ್ಎಂಇ ಹಾಗೂ ಸ್ಟಾರ್ಟಪ್ಗಳಿಂದ ಅಭಿಪ್ರಾಯ ಸಂಗ್ರಹಿಸಿದೆ. (ಏಜೆನ್ಸೀಸ್)