ರಾಜ್ಯದ ಬೇಹುಗಾರಿಕೆಯ ದೊಡ್ಡ ವೈಫಲ್ಯ: ಭಾಸ್ಕರ್ ರಾವ್ ಆರೋಪ

IMG-20240910-WA0068
Published on

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ರಾಜ್ಯ ಬಿಜೆಪಿ ಕಚೇರಿಗೆ ಭದ್ರತೆ ಒದಗಿಸಿಕೊಡುವುದರಲ್ಲಿ ಹಿಂದೆ ಮುಂದೆ ನೋಡುತ್ತಿದೆ. ಇದು ಬೇಹುಗಾರಿಕೆಯ ಅತ್ಯಂತ ದೊಡ್ಡ ವೈಫಲ್ಯ ಎಂದು ಬಿಜೆಪಿ ಮುಖಂಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆರೋಪಿಸಿದರು.  ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಕಚೇರಿಯನ್ನು ಭಯೋತ್ಪಾದಕರು ಗುರಿಯಾಗಿ ಇಟ್ಟುಕೊಂಡಿದ್ದರು. ಕಾರಣಾಂತರದಿಂದ ರಾಮೇಶ್ವರಂ ಕೆಫೆಗೆ ಹೋಗಿ ಬಾಂಬ್ ಸ್ಫೋಟ ನಡೆಸಿದ್ದು ಎನ್‍ಐಎ ತನಿಖೆ ವೇಳೆ ಗೊತ್ತಾಗಿದೆ . ಇದೇ ವಿಚಾರವನ್ನು ಅದು ಕೋರ್ಟಿಗೆ ತಿಳಿಸಿದೆ ಎಂದರು. ಬೇಹುಗಾರಿಕೆ ವಿಫಲತೆಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರೇ ಹೊಣೆಗಾರರು. ರಾಜ್ಯದ ಗೃಹ ಸಚಿವರು ಸಂಪೂರ್ಣ ಅಸಮರ್ಥರಾಗಿದ್ದಾರೆ. ಅವರು ರಾಜೀನಾಮೆ ಕೊಡಬೇಕು ಅಥವಾ ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.

ಈಡೇರದ ಅವಶ್ಯಕತೆಗಳು

ಬೆಂಗಳೂರು ನಗರ ಬೇಹುಗಾರಿಕಾ ದಳ, ನಗರ ಭಯೋತ್ಪಾದನಾ ನಿಗ್ರಹ ದಳ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಚಿಸಿದ ಆಂತರಿಕ ಭದ್ರತಾ ಇಲಾಖೆಗಳು ವಿಫಲವಾಗಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 16 ತಿಂಗಳಾದರೂ ಒಂದೇ ಒಂದು ಸಾರಿ ಈ ವಿಭಾಗಗಳ ಅವಶ್ಯಕತೆಗಳನ್ನು ಈಡೇರಿಸಿಲ್ಲ. ಇದೇ ಕಾರಣಕ್ಕೆ ಎನ್‍ಐಎ, ಕರ್ನಾಟಕದಲ್ಲಿ ಮಾಹಿತಿ ಸಂಗ್ರಹ ಮಾಡುವುದಲ್ಲದೆ, ದಾಳಿ, ಬಂಧನ, ತನಿಖೆ, ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುತ್ತಿದೆ ಎಂದರು.

ಹಿಂದೆ ಜಗದೀಶ ಶೆಟ್ಟರ್ ಅವರ ನೇತೃತ್ವದ ಬಿಜೆಪಿ ಸರ್ಕಾರ ಇರುವಾಗ ಭಯೋತ್ಪಾದನೆ ಚಟುವಟಿಕೆ ಪತ್ತೆಗೆ ಪ್ರತ್ಯೇಕ ವಿಭಾಗ ರೂಪಿಸಿದ್ದರು. ಆದರೆ, ವಸೂಲಿ ವಿಚಾರ ಹೊರಬರುವ ಭಯದಿಂದ ಈಗಿನ ಸರಕಾರವು ಆ ವಿಭಾಗ ಸಮರ್ಪಕವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಭ್ರಷ್ಟಾಚಾರ, ಹಣದ ಪ್ರಭಾವದಿಂದ ಪೊಲೀಸ್ ಇಲಾಖೆಯು ಸರಿಯಾಗಿ ಕೆಲಸ ಮಾಡದಂತಾಗಿದೆ. ಇಲಾಖೆ ನಿಷ್ಕ್ರಿಯವಾಗಿದ್ದು, ರಾಜ್ಯದ ಜನರ ಸುರಕ್ಷತೆ ಜೊತೆ ಆಟವಾಡುವ ಸ್ಥಿತಿ ಬಂದಿದೆ ಎಂದು ಟೀಕಿಸಿದರು.

ಬೆಂಗಳೂರು, ದೇಶ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಹಣಕಾಸು ಕೇಂದ್ರವೆನಿಸಿದೆ. ಈ ನಗರಕ್ಕೆ ಸಿಗಬೇಕಾದಷ್ಟು ರಕ್ಷಣೆ ಸಿಗುತ್ತಿಲ್ಲ. ಕಡಿಮೆ ಸಂಖ್ಯೆಯ ಪೊಲೀಸ್ ವ್ಯವಸ್ಥೆಯಿಂದ ತನಿಖೆ ಕಾರ್ಯ ನಡೆದಿದೆ. ಸರಕಾರವು ತಾನು ಕಾನೂನು ಮತ್ತು ಸುವ್ಯವಸ್ಥೆಗೆ ಬೇಕಾದ ಮೂಲಸೌಕರ್ಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಒಬ್ಬ ಪೇದೆಯನ್ನು ಸೇರಿಸಿಲ್ಲ

ಕಳೆದ 16 ತಿಂಗಳಿನಲ್ಲಿ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಗೆ ಒಬ್ಬ ಎಸ್‍ಐ, ಒಬ್ಬ ಕಾನ್‍ಸ್ಟೆಬಲ್ ಕೂಡ ಸೇರಿಸಿಲ್ಲ; ಮೂಲಸೌಕರ್ಯ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಸುರಕ್ಷತೆಯತ್ತ ಗಮನ ಕೊಡುತ್ತಿಲ್ಲ. ಕೇಂದ್ರ ಸರಕಾರ ನೀಡುವ ನಿರ್ಭಯಾ ನಿಧಿಯನ್ನೂ ಬಳಸಿಲ್ಲ ಎಂದರು. ಭಯೋತ್ಪಾದನೆ, ಮಾದಕವಸ್ತು ನಿಯಂತ್ರಣದಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವರು ಹೆಚ್ಚು ಸಕ್ರಿಯರಾಗಬೇಕಿತ್ತು. ಮಾದಕವಸ್ತು ಮಾರಾಟ, ಸಾಗಾಟ ಸಂಬಂಧ ಸಣ್ಣಪುಟ್ಟ ಮಾರಾಟಗಾರರನ್ನು ಗುರಿ ಮಾಡಲಾಗುತ್ತಿದೆ ಎಂದು ದೂರಿದರು.

ಕೋಟ್ಯಂತರ ರೂಪಾಯಿ ಕೊಟ್ಟು ಸಿಸಿಬಿಗೆ ಯಾಕೆ ಹೋಗುತ್ತಾರೆ? ಎಂದು ಕೇಳಿದ ಅವರು, ಸಿಸಿಬಿಯನ್ನು ಬಂದ್ ಮಾಡಿದರೆ, ಬೆಂಗಳೂರು ನಗರದ ಒಳಗೆ ಅಪರಾಧ ಕಡಿಮೆ ಆಗಬಹುದೆಂದು ನಾವು ಆಂತರಿಕವಾಗಿ ಮಾತನಾಡಿದ್ದಿದೆ ಎಂದು ಭಾಸ್ಕರ್ ರಾವ್ ಹೇಳಿದರು. ಬಿಜೆಪಿ ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್   ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net