ಗ್ರಾಮ ಸಡಕ್ ಪಿತಾಮಹ ದೇವೇಗೌಡ ; ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದನೆ

31 bidadi photo 2
Published on

ಬಿಡದಿ: ಗ್ರಾಮ ಸಡಕ್ ಯೋಜನೆಯ ಪಿತಾಮಹ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಜಿಲ್ಲೆಯಲ್ಲಿ ಟೇಪ್ ಕಟ್ ಮಾಡಲು ಬಂದಿರುವವರು ದೆಹಲಿಯಲ್ಲಿ ದಾಖಲೆಗಳನ್ನು ತೆಗೆದು ನೋಡಲಿ ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಬಿಡದಿ ಹೋಬಳಿ ಕೇತಿಗಾನಹಳ್ಳಿಯಲ್ಲಿ ಬಿಡದಿ ಪುರಸಭೆಗೆ ಆಯ್ಕೆಯಾದ ನೂತನ ಸದಸ್ಯರಿಂದ ಸೋಮವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾನು 1996ರಲ್ಲಿ ಲೋಕಸಭಾ ಸದಸ್ಯನಾಗಿದ್ದಾಗ ಶಾನುಭೋಗನಹಳ್ಳಿ, ಕೈಲಾಂಚ ಮತ್ತು ಶಾನುಮಂಗಲ ಬಳಿ ಸೇತುವೆ ನಿರ್ವಾಣ ಮಾಡಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿತ್ತು. ಈ ಮೂರು ಸೇತುವೆಗಳ ನಿರ್ವಾಣಕ್ಕಾಗಿ ನಡೆದ ಚರ್ಚೆ ದೇಶದಲ್ಲಿ ಹಳ್ಳಿಗಳ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಕಾರಣವಾಯಿತು. ನಂತರ ವಾಜಪೇಯಿ ಅವರು ಪ್ರಧಾನಮಂತ್ರಿಯಾದಾಗ ಅದು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಎಂದು ಕರೆಯಲಾಯಿತು. ಈ ಯೋಜನೆಯಲ್ಲಿ ಕೇಂದ್ರದ ಜತೆಗೆ ರಾಜ್ಯದ ಪಾಲಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ : ಕನಕಪುರದಲ್ಲಿ ಬಂಡೆ ಒಡೆದು ಕುಳಿತಿದ್ದವರು ಈಗ ಕಲ್ಲು ಒಡೆಯಲು ಜಾಗವಿಲ್ಲವೇನೋ, ನಮ್ಮನ್ನು ಎಚ್ಚರಿಸಲು ಬಂದಿದ್ದೇವೆ ಎಂಬಂತೆ ಮಾತನಾಡುತ್ತಿದ್ದಾರೆ. ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ. ಕ್ಷೇತ್ರದಲ್ಲಿ ಎಂದಿಗೂ ಗುತ್ತಿಗಾರರಿಂದ ಕಮಿಷನ್ ಪಡೆದು ಕಳಪೆ ಕೆಲಸ ಮಾಡಿ ಎಂದು ಹೇಳಿದವನಲ್ಲ. ಜೆಡಿಎಸ್ ಗುತ್ತಿಗೆದಾರರನ್ನು ಗುರಿಯಾಗಿಸಿಕೊಂಡು ಸಂಸದರ ವೀರಾವೇಶದ ಭಾಷಣವನ್ನು ನೋಡಿದ್ದೇನೆ. ನಮ್ಮ ಭಾಗದಲ್ಲಿ ಇವರು ಬಂದು ಹೇಳುವ ಅವಶ್ಯಕತೆಯಿಲ್ಲ. ಕನಕಪುರ ತಾಲೂಕು ನರೇಗಾದಲ್ಲಿ ಕ್ರಾಂತಿಡಿಲ್ಲ. ದೊಡ್ಡಾಲಹಳ್ಳಿ ಗ್ರಾಪಂನಲ್ಲಿ ನಿಮ್ಮ ಪಟಾಲಂಗಳು ನರೇಗಾ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಹೊರಕ್ಕೆ ಬರಲಿದೆ ಎಂದು ಎಚ್‌ಡಿಕೆ ಕಿಡಿಕಾರಿದರು.

ಸುರೇಶ್ ಎಂಪಿ ಆಗಿರಲಿಲ್ಲ: 2008ರಲ್ಲಿ ಕಾವೇರಿ ಜಲಾಯನ ಪ್ರದೇಶದಲ್ಲಿ ಕೆರೆ ತುಂಬಿಸುವ ಕೆಲಸ ನಡೆಯುತ್ತಿದ್ದಾಗ ಮಾರ್ಚ್ 2013ರಲ್ಲಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಸಮಯದಲ್ಲಿ ಕಾವೇರಿ ನೀರಾವರಿ ನಿಗಮದಲ್ಲಿ ಸಾತನೂರಿನ 24, ರಾಮನಗರದ 3 ಕೆರೆಗಳನ್ನು ತುಂಬಿಸಲು ಡಿಪಿಆರ್ ತಯಾರಿಸಿದಾಗ ಡಿ.ಕೆ.ಸುರೇಶ್ ಎಂಪಿಯಾಗಿರಲಿಲ್ಲ. 2018ರಲ್ಲಿ ನಾನು ಸಿಎಂ ಆದಾಗ ತೆಂಗಿನಕಲ್ಲು ಕೆರೆಗೆ ನೀರು ಬಿಟ್ಟಿದ್ದು ನಾನು. ಆ ಯೋಜನೆಗೆ 16 ಕೋಟಿ ರೂ. ಸರ್ಕಾರದಿಂದ ಬಿಡುಗಡೆ ಮಾಡಿದ್ದೇನೆ. ವೃಷಭಾವತಿಗೆ 106 ಕೋಟಿ ರೂ. ನೀಡಿದ್ದೇನೆ. ಕನಕಪುರ ಪಟ್ಟಣದ ರಸ್ತೆ ಅಗಲೀಕರಣಕ್ಕೆ 53 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಿದ್ದು ನಾನು. ಇದರಲ್ಲಿ ಡಿ.ಕೆ. ಸೋದರರ ಕೊಡುಗೆ ಏನೂ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಛಿದ್ರಗೊಳಿಸುವ ಆಸೆ ಫಲಿಸದು: ಕಾಂಗ್ರೆಸ್ ಸರ್ಕಾರವಿದ್ದಾಗ ಸತ್ತೆಗಾಲದಿಂದ ನೆಟ್ಟಕಲ್ಲು ಮೂಲಕ ಸಾತನೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಡಿಕೆ ಬ್ರದರ್ಸ್‌ ಅವಧಿಯಲ್ಲಿ ಆಗಿದ್ದು ಬಿಟ್ಟರೆ ಚನ್ನಪಟ್ಟಣ, ರಾಮನಗರ, ಮಾಗಡಿ ತಾಲೂಕು ಕೆರೆ ತುಂಬಿಸುವುದಾಗಿರಲಿಲ್ಲ. ಆಗ ನಾನು ಹಣಕಾಸು ಸಚಿವನಾಗಿದ್ದಾಗ 540 ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಿದೆ, ಈಗ ಕಾಂಗ್ರೆಸ್‌ನವರು ಯೋಜನೆಗಳು ನಮ್ಮದು ಎಂದು ಭಾಷಣ ಮಾಡಿಕೊಂಡು ಜೆಡಿಎಸ್ ಛಿದ್ರ ಮಾಡುವ ಮಾತನಾಡುತ್ತಿದ್ದಾರೆ. ಅವರ ಪ್ರಯತ್ನ ಎಂದಿಗೂ ಫಲಿಸದು ಎಂದು ಎಚ್‌ಡಿಕೆ ತಿರುಗೇಟು ನೀಡಿದರು.

ಸಂಸದರ ಕೊಡುಗೆ ಏನು: ಜಿಲ್ಲೆಯ ಅಭಿವೃದ್ದಿಗೆ ಸಂಸದರು ಎಷ್ಟು ಅನುದಾನ ಕೊಟ್ಟಿದ್ದಾರೆ ಎಂದು ಜನರ ಮುಂದೆ ಇಡಲಿ. ಎಂಪಿ ಆದವರು ಜನರನ್ನು ಉಳಿಸುವ ಕೆಲಸ ವಾಡಲಿ. ಕನಕಪುರ ಕಸಬಾ ಹೋಬಳಿಯ ಗ್ರಾಮವೊಂದರಲ್ಲಿ ಕುಟುಂಬವೊಂದು ದಯಾಮರಣ ಕೇಳುವ ಪರಿಸ್ಥಿತಿ ನಿರ್ವಾಣ ಮಾಡಿದ್ದೀರಿ. ನಿಮ್ಮ ಹಾವಳಿಯಿಂದ ತಪ್ಪಿಸಲು ಹಾರೋಹಳ್ಳಿ ಮರಳವಾಡಿಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಮಾಡಲಾಗಿದೆ ಎಂದು ಮಾತಿನುದ್ದಕ್ಕೂ ಡಿಕೆ ಬ್ರದರ್ಸ್‌ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

ಶಾಸಕ ಎ.ಮಂಜುನಾಥ್, ಜಿಪಂ ಮಾಜಿ ಸದಸ್ಯ ಎಚ್.ಎಲ್. ಚಂದ್ರು, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀಮಂಜುನಾಥ್, ಪುರಸಭಾ ಸದಸ್ಯರಾದ ದೇವರಾಜು, ರಾಕೇಶ್, ಲೋಹಿತ್‌ಗೌಡ, ಹರೀಶ್, ನಾಗರಾಜು, ಲಲಿತಾ, ಮಂಜುಳಾ, ಆಯಿಷಾ, ಸರಸ್ವತಮ್ಮ, ಯಲ್ಲಮ್ಮ, ಜೆಡಿಎಸ್ ಮುಖಂಡರಾದ ರಮೇಶ್‌ಕುವಾರ್, ಸಿದ್ದರಾಜು, ಕುಮಾರ್, ನರಸಿಂಹಯ್ಯ, ರವಿಕುಮಾರ್, ಗೋಪಾಲ್ ಮತ್ತಿತರರು ಇದ್ದರು.

ಕಾಂಗ್ರೆಸ್‌ನಿಂದ ನೀರಾವರಿ ಯೋಜನೆಗಳಿಗೆ ಅಡ್ಡಿ: ಮೆಕೇದಾಟು ಯೋಜನೆ ಬಗ್ಗೆ ಪಾದಯಾತ್ರೆ ಮಾಡಿಕೊಂಡು ನಮ್ಮ ನೀರು ನಮ್ಮ ಹಕ್ಕು ಬದ್ಧತೆ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು 1952ರಿಂದ ರಾಜ್ಯದ ನೀರಾವರಿ ಯೋಜನೆಗಳನ್ನು ನಿಲ್ಲಿಸುವ ವಿಷಯದಲ್ಲಿ ಮಾಡಿದ ಪ್ರಯತ್ನಗಳು ಮತ್ತು ನೀರಾವರಿ ಯೋಜನೆಗೆ ನಾನು ನೀಡಿದ ಕೊಡುಗೆಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಎಚ್‌ಡಿಕೆ ಹೇಳಿದರು.

ಬಿಡದಿ ಪುರಸಭೆಯಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಇರಿ. ರಾಜ್ಯದಲ್ಲಿ ಜನರ ಸೇವೆ ವಾಡಲು 2023ಕ್ಕೆ ಒಳ್ಳೆಯ ದಿನಗಳು ಬರುತ್ತಿವೆ. ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net