

ಶಿವಮೊಗ್ಗ: ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರ ನಿಧನದ ಸಂಗತಿ ಜಿಲ್ಲೆಯ ಅವರ ಅಸಂಖ್ಯಾತ ಓದುಗ ಅಭಿಮಾನಿ ಬಳಗಕ್ಕೆ ಆಘಾತ ಉಂಟುಮಾಡಿದೆ. ಶಿವಮೊಗ್ಗದಲ್ಲಿ ಹಲವು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭೈರಪ್ಪ ಭಾಗವಹಿಸಿ ಮಾತನಾಡಿದ್ದು ಇನ್ನು ನೆನಪು ಮಾತ್ರ.
ಎಡ ಹಾಗೂ ಬಲಪಂಥೀಯ ಚಿಂತನೆಯ ಮಿಶ್ರಣವಾದ ಶಿವಮೊಗ್ಗದಲ್ಲಿ ಭೈರಪ್ಪ ಅವರ ದೊಡ್ಡ ಓದುಗ ಬಳಗವೇ ಇದೆ. ಅವರ ಯಾವುದೇ ಕೃತಿ ಬಿಡುಗಡೆಯಾದರೂ ಅದನ್ನು ಹಬ್ಬದಂತೆ ಸಂಭ್ರಮಿಸುವ ಕೃತಿಯ ಬಗ್ಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವ, ಕೃತಿಗೆ ವಿರೋಧ ವ್ಯಕ್ತವಾದರೆ ಅದನ್ನು ಶತಾಯಗತಾಯ ಸಮರ್ಥಿಸಿಕೊಳ್ಳುವ ಅಸಂಖ್ಯಾತ ಓದುಗ ಬಳಗವನ್ನು ಶಿವಮೊಗ್ಗದಲ್ಲಿ ಅವರು ಹೊಂದಿದ್ದರು ಎಂಬುದು ವಿಶೇಷ.
ಶಿವಮೊಗ್ಗದಲ್ಲಿ ಯಾವುದಾದರೂ ಕಾರ್ಯಕ್ರಮಕ್ಕೆ ಭೈರಪ್ಪ ಆಗಮಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದರೆ ಅವರ ಓದುಗ ವರ್ಗದಲ್ಲಿ ಅದೇನೋ ಪುಳಕ. ಅವರ ಮಾತುಗಳನ್ನು ಕೇಳುವ, ನೇರವಾಗಿ ನೋಡುವ ಸಂದರ್ಭ ಒದಗಿ ಬಂತಲ್ಲ ಎಂಬ ಧನ್ಯತಾ ಭಾವ. ಅದೇ ವೇಳೆಗೆ ಭೈರಪ್ಪನವರ ಚಿಂತನೆಗಳನ್ನು ವಿರೋಧಿಸುವ ವರ್ಗದಿಂದ ಅಪಸ್ವರ. ಇದೆಲ್ಲವೂ ಅನೇಕ ಬಾರಿ ಶಿವಮೊಗ್ಗದ ಇತಿಹಾಸದಲ್ಲಿ ದಾಖಲಾಗಿದ್ದುಂಟು.